Advertisement

Chikkamagaluru ಮುಖ್ಯವಾಹಿನಿಗೆ ಮರಳಿದ ನಕ್ಸಲರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ

08:06 PM Sep 18, 2024 | Team Udayavani |

ಚಿಕ್ಕಮಗಳೂರು: ಮುಖ್ಯವಾಹಿನಿಗೆ ಮರಳಿದ ನಕ್ಸಲರ ಸಮಸ್ಯೆಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಹತ್ತು ವರ್ಷ ಕಳೆದರೂ ಪರಿಹರಿಸಿಲ್ಲ. ಹೀಗಾಗಿ ಉತ್ತಮ ಬದುಕು ಕಟ್ಟಿಕೊಳ್ಳುವ ಅವರ ಕನಸು ಈಡೇರದೆ ಬದುಕು ನರಕ ಸದೃಶ್ಯವಾಗಿದೆ ಎಂದು ನಕ್ಸಲ್‌ ಆರೋಪಿತರ ಪರ ನಾಗರಿಕ ನಿಯೋಗ ಆರೋಪಿಸಿದೆ.

Advertisement

ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಸಿ.ಎನ್‌. ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದರ್‌ ಕುಮಾರ್‌ ದಹೀಮ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, 2016ರಲ್ಲಿ ನಾಲ್ವರು ಹಾಗೂ 2017ರಲ್ಲಿ ಮೂವರು ನಕ್ಸಲ್‌ ಚಳವಳಿ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಮರಳಿದರೂ ಅವರ ವಿರುದ್ಧ ಪ್ರಕರಣಗಳು, ಭೂಮಿ, ವಸತಿ, ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇದುವರೆಗೂ ಪರಿಹರಿಸಿಲ್ಲ. ಕನ್ಯಾಕುಮಾರಿ ಎಂಬ ನಕ್ಸಲ್‌ ಆರೋಪಿತ ಮಹಿಳೆ ವಿಚಾರಣಾ ಧೀನ ಕೈದಿಯಾಗಿ ಜೈಲಿನಲ್ಲೇ ದಿನ ಕಳೆಯುತ್ತಿದ್ದಾಳೆ. ಆಕೆ ಎಳೆ ವಯಸ್ಸಿನ ಮಗು ತಾಯಿಯ ಮಮತೆ, ಆರೈಕೆಯಿಂದ ವಂಚಿತವಾಗಿದೆ ಎಂದು ತಿಳಿಸಿದರು.

ಬೇಡಿಕೆ ಈಡೇರಿಸಿ: ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯ ಅವರ ಮರಣ ನಂತರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದರೂ ರಾಜ್ಯ ಸಮಿತಿ ಪುನರ್‌ ರಚನೆಯಾಗದ ಕಾರಣ ಹಿನ್ನಡೆಯಾಗಿತ್ತು. ಇತ್ತೀಚೆಗೆ ಸಮಿತಿ ಪುನರ್‌ ರಚನೆಗೊಂಡಿದ್ದು, ಮುಖ್ಯವಾಹಿನಿಗೆ ಬಂದಿರುವ ನಕ್ಸಲ್‌ ಆರೋಪಿತರ ಎಲ್ಲ ಬೇಡಿಕೆ ಹಾಗೂ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.

ನಕ್ಸಲರ ಮೇಲಿನ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಸರ್ಕಾರ ಮುಂದಾಗಬೇಕು. ಕನ್ಯಾಕುಮಾರಿ ಮೇಲಿನ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಿ ಇತ್ಯರ್ಥಪಡಿಸಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಖ್ಯವಾಹಿನಿಗೆ ಬಂದಿರುವ ನಕ್ಸಲ್‌ ಆರೋಪಿತರಾದ ನೀಲಗುಳಿ ಪದ್ಮನಾಭ ಹಾಗೂ ರಿಜ್ವಾನ ಬೇಗಂ ಎಂಬವರಿಗೆ ಬಿಗ್ಗನಹಳ್ಳಿಯ ಸ.ನಂ.265ರಲ್ಲಿ ನಾಲ್ಕು ವರ್ಷ ಹಿಂದೆಯೇ ತಲಾ ಎರಡು ಎಕರೆ ಭೂಮಿ ಗುರುತಿಸಲಾಗಿದ್ದು, ಕೂಡಲೇ ಮಂಜೂರು ಮಾಡಬೇಕು. ನೀಲಗುಳಿ ಪದ್ಮನಾಭ ಅವರು ವಾಸಿಸುವ ಗುಡಿಸಲಿಗೆ ವಿದ್ಯುತ್‌-ಹಕ್ಕುಪತ್ರ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ನಕ್ಸಲ್‌ ಆರೋಪಿತರ ಪರ ನಾಗರಿಕರ ನಿಯೋಗದ ಸದಸ್ಯರು ಹಾಗೂ ಪತ್ರಕರ್ತರಾದ ಸಿರಿಮನೆ ನಾಗರಾಜ್‌, ದಿನೇಶ್‌ ಪಟವರ್ಧನ್‌ ಹಾಗೂ ಹೋರಾಟಗಾರರಾದ ನೀಲಗುಳಿ ಪದ್ಮನಾಭ, ಗೌಸ್‌ಮಹಿದ್ದೀನ್‌, ಹಸನಬ್ಬ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next