Advertisement

ಕಾಫಿನಾಡಿನಲ್ಲಿ ಪುಷ್ಯ ಮಳೆ ಅಬ್ಬರ

06:24 PM Jul 23, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಭೋರ್ಗರೆಯುತ್ತಿರುವ ಮಳೆಗೆ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ಭಾಗದಲ್ಲಿ ಹರಿಯುವ ನದಿಗಳು ಹಳ್ಳಕೊಳ್ಳ, ಕೆರೆಕಟ್ಟೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿಪಾತ್ರದಲ್ಲಿ ಜನ ಸಂಚರಿಸದಂತೆ ಜಿಲ್ಲಾಡಳಿತ ಸೂಚಿಸಿದೆ. ಬುಧವಾರ ರಾತ್ರಿಯಿಂದ ಗುರುವಾರ ದಿನವಿಡೀ ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ, ಚಿಕ್ಕಮಗಳೂರು, ತರೀಕೆರೆ, ಕಡೂರು ಭಾಗದಲ್ಲಿ ಭಾರೀ ಮಳೆಯಾಗಿದೆ.

Advertisement

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಳಸ ತಾಲೂಕಿನ ಕಳಸ, ಹೊರನಾಡು ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗಿದ್ದು ಕಳಸ- ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಭದ್ರಾನದಿ ನೀರಿನಲ್ಲಿ ಮುಳುಗಡೆಯಾಗಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಕಳಸ ಹೊರನಾಡು ಸಂಪರ್ಕ ಸ್ಥಗಿತಗೊಂಡಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್‌, ಜಾವಳಿ, ಚಾರ್ಮಾಡಿಘಾಟಿ ಪ್ರದೇಶದಲ್ಲಿ ನಿರಂತರ ಮಳೆಯಾಗಿದ್ದು, ಚಾರ್ಮಾಡಿ ಘಾಟಿ ಸುತ್ತಮುತ್ತ ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ. ಮಂಜು ಮುಸುಕಿದ ವಾತಾವರಣದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

ಘಾಟಿ ಪ್ರದೇಶದ ರಸ್ತೆಬದಿಗಳಲ್ಲಿ ಜಲಪಾತಗಳು ಧುಮ್ಮಿಕ್ಕುತ್ತಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮನ ಸೋಲುತ್ತಿದ್ದಾರೆ. ವಾಹನ ಸವಾರರು ವಾಹನಗಳನ್ನು ನಿಲ್ಲಿಸಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ನರಸಿಂಹರಾಜಪುರ ತಾಲೂಕಿನ ಮಾಗುಂಡಿ, ಖಾಂಡ್ಯ, ಬನ್ನೂರು, ಕಣತಿ, ಸಂಗಮೇಶ್ವರ ಪೇಟೆ, ಬಾಳೆಹೊನ್ನೂರು ಸುತ್ತಮುತ್ತ ನಿರಂತರ ಮಳೆಯಾಗುತ್ತಿದ್ದು, ಮಹಲ್‌ಗೋಡ್‌ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬಾಳೆಹೊನ್ನೂರು- ಕಳಸ ಸಂಪರ್ಕ ಬಂದ್‌ ಆಗಿದೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಈ ಭಾಗದಲ್ಲಿ ಹರಿಯುವ ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕಪ್ಪೆ ಶಂಕರ ನದಿನೀರಿನಲ್ಲಿ ಮುಳುಗಿದ್ದು, ಪ್ರವಾಹದ ನೀರು ಬೈಪಾಸ್‌ ರಸ್ತೆಗೆ ನುಗ್ಗಿ ರಸ್ತೆ ಸಂಚಾರ ಕಡಿತವಾಗಿದೆ. ಕೊಪ್ಪ ತಾಲೂಕಿನ ಜಯಪುರ, ಹೇರೂರು, ಬಸರೀಕಟ್ಟೆ, ಕೊಗ್ರೆ, ಜೀಜದಕಟ್ಟೆ, ಉತ್ತಮೇಶ್ವರ, ಹರಿಹರಪುರ ಸುತ್ತಮುತ್ತ ಭಾರೀ ಮಳೆಯಾಗಿದ್ದು ಈ ಭಾಗದಲ್ಲಿ ಹರಿಯುವ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತ ನಿರಂತರ ಮಳೆಯಾಗುತ್ತಿದ್ದು, ಮೋಡ ಕವಿದ ವಾತವರಣ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಜನಸಂಚಾರಕ್ಕೆ ವಿರಳವಾಗಿತ್ತು. ಬಯಲು ಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಭಾಗದಲ್ಲೂ ಭಾರೀ ಮಳೆಯಾಗಿದೆ.

Advertisement

ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್‌ ವ್ಯತ್ಯಯಗೊಂಡಿದೆ. ವಿದ್ಯುತ್‌ ಸಂಪರ್ಕ ಕಡಿತಗೊಂಡ ಪರಿಣಾಮ ಅನೇಕ ಗ್ರಾಮಗಳು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಹೊರನಾಡಿನಿಂದ “ಗೀ’ ಗ್ರಾಮಕ್ಕೆ ತೆರಳುವ ರಸ್ತೆ ಪಕ್ಕದಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಭಾರೀ ಮಳೆಯಿಂದ ಕಸಳ ಸಮೀಪದ ಅಬ್ಬುಗುಡಿಗೆ, ಕಲ್ಲುಗೋಡು ಕಿರುಸೇತುವೆ ಮಳೆ ನೀರಿನಿಂದ ಕೊಚ್ಚಿ ಹೋಗಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬುಧವಾರ ರಾತ್ರಿಯಿಂದ ನಿರಂತರವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಕಾμನಾಡಿನ ಜನರು ಕಂಗಾಲಾಗಿದ್ದಾರೆ.

ಮಳೆ ಅಬ್ಬರಕ್ಕೆ ಮಲೆನಾಡು ತತ್ತರ

ಶಿವಮೊಗ್ಗ: ಪುಷ್ಯ ಮಳೆ ಆರ್ಭಟಕ್ಕೆ ಮಲೆನಾಡು ತತ್ತರಗೊಂಡಿದ್ದು ಬುಧವಾರ ರಾತ್ರಿಯಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಗೆ ಬಚ್ಚಲು ಮನೆಯಂತಾಗಿದೆ. ಹೊಸನಗರ, ಸಾಗರ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಕೆಲ ಬಡಾವಣೆಗಳಲ್ಲಿ, ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹಳ್ಳ-ಕೊಳ್ಳಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಜನರು ಮನೆಯಿಂದ ಹೊರಬಾರದಂತಾಗಿದ್ದಾರೆ. ತುಂಗಾ ಜಲಾನಯನ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು ರಾತ್ರಿ 8 ಗಂಟೆ ವೇಳೆಗೆ 56,500 ಸಾವಿರ ಕ್ಯೂಸೆಕ್ಸ್‌ ನೀರು ಹೊರಬಿಡಲಾಗುತ್ತಿದೆ. ಭದ್ರಾ ಜಲಾಶಯಕ್ಕೆ ಗುರುವಾರ ಬೆಳಗ್ಗೆ 8 ಗಂಟೆಗೆ 15668 ಕ್ಯೂಸೆಕ್ಸ್‌, ಲಿಂಗನಮಕ್ಕಿ ಜಲಾಶಯಕ್ಕೆ 45458 ಕ್ಯೂಸೆಕ್ಸ್‌ ಒಳಹರಿವು ದಾಖಲಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next