ಚಿಕ್ಕಮಗಳೂರು: ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಮಾಹಿತಿಯನ್ನು ತಿಳಿಸದೇ ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದಾಸೀನ ಬೇಡ: ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಬಂದಿರುವ ಸರ್ಕಾರದ ಸವಲತ್ತುಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡದೇ ಅಧಿಕಾರಿಗಳು ಉದಾಸೀನ ತೋರಿದ್ದಾರೆ. ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರಿಗೆ ನೀಡುವ ಸೌಲಭ್ಯಗಳನ್ನು ಪ್ರತಿ ವರ್ಷ ಕೆಲವರಿಗೆ ಮಾತ್ರ ನೀಡಲಾಗುತ್ತಿದೆ. ಹೊಸಬರನ್ನು ಗುರುತಿಸಿ ಇಲಾಖೆಯ ಸೌಲತ್ತು ಗಳನ್ನು ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಅಧಿಕಾರಿಗಳು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕೆಂದು ಸೂಚನೆ ನೀಡಿದರು.
ಅಧಿಕಾರಿಗಳು ಸಭೆಗೆ ಆಗಮಿಸುತ್ತಿಲ್ಲ: ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಮಾತನಾಡಿ, ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಳೆದ ವರ್ಷ 30ಲಕ್ಷ ರೂ. ಕ್ರಿಯಾ ಯೋಜನೆ ಪಟ್ಟಿ ನೀಡಿದರೂ ಯಾವುದೇ ಮಾಹಿತಿ ನೀಡಿಲ್ಲ. ಈ ಬಾರಿ 35ಲಕ್ಷ ರೂ. ಬಂದಿದ್ದು, ಸಮಿತಿಗೆ ಮಾಹಿತಿ ದೊರೆತಿಲ್ಲ. ಹಾಗಾಗಿ, ಯೋಜನೆಗೆ ಅನುಮೊದನೆ ನೀಡಿಲ್ಲ. ಸರಿಯಾಗಿ ಸಸಿ ಮತ್ತು ಗಿಡಗಳನ್ನು ನೋಡಿಕೊಳ್ಳುತ್ತಿಲ್ಲ. ಜಿಪಂ ಸದಸ್ಯರು ಗ್ರಾಮಕ್ಕೆ ಸಸಿ ನೀಡುವಂತೆ ತಿಳಿಸಿದರು ಸಹ ಯಾವುದೇ ಸಸಿಗಳನ್ನು ನೀಡುತ್ತಿಲ್ಲ. ಅಧಿಕಾರಿಗಳು ಸಭೆಗೆ ಆಗಮಿಸುತ್ತಿಲ್ಲ ಎಂದು ಆರೋಪಿಸಿದರು.
ಬರಗಾಲ ಪ್ರದೇಶವೆಂದು ಘೋಷಿಸಿ: ಜಿಲ್ಲಾ ಪಂಚಾಯತ್ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಬಯಲು ಸೀಮೆಯಲ್ಲಿ ಮಳೆ ಬಾರದೆ ಜನ, ಜಾನುವಾರುಗಳಿಗೆ ತೕವ್ರ ತೊಂದರೆಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ನೀಡುವ ಮೂಲಕ ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಜಾನುವಾರುಗಳ ಬಗ್ಗೆ ಗಮನ ಹರಿಸಿ: ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ಪಶುಪಾಲನಾ ಇಲಾಖೆಯಿಂದ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿ ವಿತರಿಸಿ ಜಾನುವಾರುಗಳ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ತಿಳಿಸಿದರು.
ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ:
ಅಧಿಕಾರಿಗಳು ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಚುನಾಯಿತ ಜನಪ್ರತಿನಿಧಿ ಗಳೊಂದಿಗೆ ಚರ್ಚಿಸಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್. ಪ್ರಭಾಕರ್, ಪ್ರೇಮ, ಕೆ.ವಿ.ಮಂಜುನಾಥ್, ಅನಸೂಯಾ ಗೋಪಿಕೃಷ್ಣ, ಸುಧಾ ಯೋಗೀಶ್, ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್ ಇತರರು ಭಾಗವಹಿಸಿದ್ದರು.