ಚಿಕ್ಕಮಗಳೂರು: ಸಕಾಲಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ವಿಶೇಷಚೇತನ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೊದಲು ಜಿಲ್ಲಾಸ್ಪತ್ರೆಯು ಯುವತಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾಳೆ ಎಂದಿದ್ದು, ಈಗ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ನಗರದ ಗೌರಿ ಕಾಲುವೆಯ ನಫೀಯಾ (20) ಸಾವನ್ನಪ್ಪಿದ ಯುವತಿ.
ಅನಾರೋಗ್ಯದ ಕಾರಣದಿಂದ ಜುಲೈ 24ರಂದು ಯುವತಿಯನ್ನು ಕುಟುಂಬಿಕರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಕೋವಿಡ್ ಟೆಸ್ಟ್ ಮಾಡಿಸದೇ ದಾಖಲಿಸಲು ಖಾಸಗಿ ಆಸ್ಪತ್ರೆಗಳು ನಿರಾಕರಿಸಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಸುಮಾರು 3 ಗಂಟೆ ಪೋಷಕರು ಅಲೆದಾಡಿದ್ದರು.
ಸಕಾಲಕ್ಕೆ ಚಿಕಿತ್ಸೆ ಸಿಗದೇ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಯುವತಿ ಸಾವನ್ನಪ್ಪಿದ್ದಳು. ಆದರೆ ಯುವತಿ ಕೋವಿಡ್ ಸೋಂಕಿನಿಂದ ಸತ್ತಿದ್ದಾಳೆಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದು, ಪೋಷಕರಿಗೆ ಮೃತದೇಹ ನೀಡಿರಲಿಲ್ಲ. ಕೊನೆಯ ಕ್ಷಣದಲ್ಲಿ ಮಗಳ ಮುಖವನ್ನು ಕೂಡ ನೋಡಲಾಗದೇ ತಾಯಿ ಕಣ್ಣೀರಿಟ್ಟಿದ್ದರು.
ಯುವತಿ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಮನೆಯ ರಸ್ತೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದರು. ಆದರೆ ಗುರುವಾರ ಮೃತ ಯುವತಿಯ ಪರೀಕ್ಷಾ ವರದಿಯನ್ನು ಜಿಲ್ಲಾಡಳಿತ ನೀಡಿದ್ದು, ನೆಗೆಟಿವ್ ಬಂದಿದೆ.
ಕೋವಿಡ್ ಕಾರಣದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ, ನಂತರ ಮೃತದೇಹವನ್ನೂ ನೀಡದೇ ಇರುವ ಅಧಿಕಾರಿಗಳ ವಿರುದ್ಧ ಕುಟುಂಬಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.