ಸುಧೀರ್ ಮೊದಲಮನೆ
ಮೂಡಿಗೆರೆ: ಕೊರೊನಾ ಸೋಂಕು 2ನೇ ಅಲೆ ಹಿನ್ನೆಲೆಯಲ್ಲಿ ಸರ್ಕಾರ ವಿಧಿ ಸಿರುವ ಕರ್ಫ್ಯೂ, ಕಠಿಣ ಕ್ರಮಗಳು, ಸೋಂಕಿನ ಭೀತಿ ಹಾಗೂ ಮರಣದ ಅಂಕಿ- ಅಂಶಗಳು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಇನ್ನೇನು ಒಂದು ತಿಂಗಳ ಅವ ಧಿಯಲ್ಲಿ ಮಂಗಾರು ಪ್ರಾರಂಭವಾಗಲಿದ್ದು ಮಳೆಗಾಲಕ್ಕೆ ನಡೆಯಬೇಕಿದ್ದ ಸಿದ್ಧತೆಗಳಿಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಎದುರಾಗಿದೆ.
2 ವರ್ಷಗಳಿಂದ ಈಚೆಗೆ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಇದರ ಜೊತೆಗೆ ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ವರ್ಷ ಹೇರಲ್ಪಟ್ಟಿದ್ದ ಲಾಕ್‌ಡೌನ್ ನಿಂದಾಗಿ ಹಲವು ಕುಟುಂಬಗಳ ಜೀವನ ದುಸ್ತರವಾಗಿದೆ.
ಇದರಿಂದ ಹೊರ ಬರುವ ಮೊದಲೇ ಪುನಃ ಕೊರೊನಾ ಕರ್ಫ್ಯೂ ಹೇರಲ್ಪಟ್ಟಿರುವುದು ಭಯದ ಜೊತೆಗೆ ಮುಂದಿನ ಕ್ಲಿಷ್ಟಕರ ಜೀವನದ ಬಗ್ಗೆ ಜನರು ಚಿಂತಿತರಾಗುವಂತೆ ಮಾಡಿದೆ. ಇನ್ನು ಮಳೆಗಾಲಕ್ಕೆ ಮೊದಲು ಪ್ರತೀ ವರ್ಷದಂತೆ ಈ ಬಾರಿಯೂ ಸಿದ್ಧತೆಗಳನ್ನು ಮಾಡಿಕೊಳ್ಳುವ ಅಗತ್ಯವಿದ್ದು ವಿವಿಧ ಇಲಾಖೆಗಳ ಆದಿಯಾಗಿ ರೈತರು ಸಹ ತುರ್ತು ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವಿದೆ.
ಈ ಬಾರಿ ಹಿಂದಿನ ವರ್ಷದಂತೆ ತಿಂಗಳುಗಟ್ಟಳೆ ಕರ್ಫ್ಯೂ ವಿಧಿಸಿದರೆ ಸಾಲದ ಹೊರೆ ಜಾಸ್ತಿಯಾಗುತ್ತದೆ. ಇದೀಗ ಬೆಳಗ್ಗೆ 6-10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ವಹಿವಾಟಿಗೆ ಅವಕಾಶ ನೀಡಿದ್ದು ಕೃಷಿ ಕೆಲಸಕ್ಕೆ ಕೆಲಸಗಾರರು ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಬೆಳಗ್ಗೆ 10 ಗಂಟೆವರೆಗೆ ಮಾತ್ರ ಸಾರ್ವಜನಿಕರ ಓಡಾಟಕ್ಕೆ ಅನುಮತಿ ನೀಡಲಾಗಿದ್ದು, ದೂರದ ಪ್ರದೇಶಗಳಿಂದ ಕೂಲಿ ಕೆಲಸಕ್ಕೆ ಹಾಜರಾಗುವ ಕೆಲಸಗಾರರಿಗೆ ಪೊಲೀಸರು ಅಡ್ಡಗಟ್ಟುತ್ತಿರುವುದು ಭಯಕ್ಕೆ ಕಾರಣವಾಗಿದೆ. ಇತ್ತ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸದೆ ಇದ್ದಲ್ಲಿ ಬೆಳೆಗಳು ಕೈ ತಪ್ಪುವ ಆತಂಕ ಬಹುತೇಕ ರೈತರಲ್ಲಿ ಮನೆ ಮಾಡಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ರೈತ ರಾಮೇಗೌಡ ಆಗ್ರಹಿಸಿದ್ದಾರೆ.
ಇವುಗಳ ಜೊತೆಗೆ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಮೆಸ್ಕಾಂ, ದೂರ ಸಂಪರ್ಕ ಇಲಾಖೆಗಳಿಗೆ ಸಂಬಂ ಧಿಸಿದ ಸಿಬ್ಬಂದಿ ಮಳೆಗಾಲಕ್ಕೂ ಮುನ್ನ ಕೆಲಸ ಮುಗಿಸುವ ಅನಿವಾರ್ಯತೆ ಇದ್ದು ಕೆಲಸ ಮುಗಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.