ಚಿಕ್ಕಮಗಳೂರು: ಜಿಲ್ಲಾದ್ಯಂತ ಪಡಿತರ ಚೀಟಿ ಇ-ಕೆವೈಸಿ ನೋಂದಣಿ ಸ್ಥಗಿತಗೊಂಡಿದ್ದರೂ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲೂ ಪಡಿತರ ಚೀಟಿದಾರರಿಗೆ ಪಡಿತರ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ ಇಲಾಖೆ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸರಕಾರದ ಆದೇಶದಂತೆ ಜಿಲ್ಲಾದ್ಯಂತ ಇ-ಕೆವೈಸಿ ನೋಂದಣಿಗೆ ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗಿದೆ. ಆದರೆ ಸರ್ವರ್ ಸಮಸ್ಯೆ ಹಾಗೂ ಇತರ ಕಾರಣಗಳಿಂದಾಗಿ ಇ-ಕೆವೈಸಿ ನೋಂದಣಿ ಜಿಲ್ಲೆಯಲ್ಲಿ ಸಂಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಇ-ಕೆವೈಸಿ ನೋಂದಣಿಗೆ ದಿನಾಂಕವನ್ನು ವಿಸ್ತರಣೆ ಮಾಡಲಿದೆ. ಈ ಸಂಬಂಧ ಇಲಾಖೆಯಿಂದ ಇನ್ನೂ ಆದೇಶ ಬಂದಿಲ್ಲ.
ಶೀಘ್ರ ಆದೇಶ ಹೊರಬೀಳಲಿದೆ ಎಂದರು. ಇ-ಕೆವೈಸಿಗೆ ಆ.10 ಕೊನೆ ದಿನವಾಗಿದ್ದರಿಂದ ನೋಂದಣಿಯನ್ನು ಸದ್ಯ ಜಿಲ್ಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಸರಕಾರದ ಆದೇಶದನ್ವಯ ಕ್ರಮವಹಿಸಲಾಗುತ್ತದೆ. ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದ್ದರೂ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಆ.11ರಿಂದ ಪಡಿತರ ವಿತರಣೆಗೆ ಕ್ರಮವಹಿಸಲಾಗಿದೆ. ಇ-ಕೆವೈಸಿ ನೋಂದಣಿ ಮಾಡಿಸದವರಿಗೂ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಗೊಂದಲಕ್ಕೊಳಗಾಗಬೇಕಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ರಾಜ್ಯ ಸರಕಾರ ಸೀಮೆಎಣ್ಣೆ ಮುಕ್ತ ರಾಜ್ಯ ಮಾಡುವ ಗುರಿ ಹೊಂದಿದ್ದು, ಜಿಲ್ಲೆಯ ಮಲೆನಾಡು ಭಾಗದ ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ, ಎನ್.ಆರ್. ಪುರ ಹಾಗೂ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಅವಶ್ಯಕತೆ ಇದ್ದವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ 1 ಲೀ. ಸೀಮೆಎಣ್ಣೆ ವಿತರಿಸಲಾಗುತ್ತಿದೆ. ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳು ಈಗಾಗಲೇ ಸೀಮೆಎಣ್ಣೆ ಮುಕ್ತ ತಾಲೂಕುಗಳಾಗಿವೆ.
ಇನ್ನು ಹೆಚ್ಚೆಂದರೆ 3 ತಿಂಗಳವರೆಗೆ ಸೀಮೆಎಣ್ಣೆ ಅಗತ್ಯ ಇದ್ದವರಿಗೆ ಸಿಗಲಿದ್ದು, ನಂತರ ಯಾರಿಗೂ ಸೀಮೆಎಣ್ಣೆ ಸಿಗಲ್ಲ. ಇದರ ಬದಲಾಗಿ ಸೀಮೆಎಣ್ಣೆ ಬಳಸುತ್ತಿರುವ ಕುಟುಂಬ ಗುರುತಿಸಿ ಅಡುಗೆ ಅನಿಲ ವಿತರಣೆಗೆ ಸರಕಾರ ಕ್ರಮವಹಿಸಲಿದೆ ಎಂದರು.