ಚಿಕ್ಕಮಗಳೂರು: ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಉಪನ್ಯಾಸಕರಿಗೆ ಸರ್ಕಾರದ ಮಾರ್ಗಸೂಚಿಯಂತೆ ಮೂಲವೇತನ ಹಾಗೂ ಸೇವಾಭದ್ರತೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಖಾಸಗಿ ಶಾಲಾ- ಕಾಲೇಜು ಶಿಕ್ಷಕರು ಮತ್ತು ಉಪನ್ಯಾಸಕರು ಕೋವಿಡ್ ಸಂಕಷ್ಟದ ಕಾಲದಲ್ಲಿ ಖಾಸಗಿ ಶಾಲಾ ಕಾಲೇಜು ಬಂದ್ ಆಗಿರುವುದರಿಂದ ಶಿಕ್ಷಕರು, ಉಪನ್ಯಾಸಕರ ಬದುಕು ಮೂರಾಬಟ್ಟೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ- ಕಾಲೇಜು ಆಡಳಿತ ಮಂಡಳಿಗಳು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಶಿಕ್ಷಕರನ್ನು ಶೋಷಣೆಗೆ ಒಳಪಡಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಖಾಸಗಿ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ನೇಮಕಾತಿ ಪತ್ರ, ಮೂಲವೇತನ, ಸೇವಾ ಭದ್ರತೆಯನ್ನು ನೀಡದಿರುವುದರಿಂದ ಶಿಕ್ಷಕರು ಜೀವನ ನಡೆಸುವುದು ಕಷ್ಟವಾಗಿದೆ. ಇದರಿಂದ ಕೋವಿಡ್ ನಿಂದ ಸಂಕಷ್ಟದಲ್ಲಿರುವ ಶಿಕ್ಷಕರು, ಉಪನ್ಯಾಸಕರಿಗೆ ಸರ್ಕಾರದ ಪರಿಹಾರ ಯೋಜನೆಗಳು ಸಿಗದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಯಾವ ಶಾಲಾ- ಕಾಲೇಜುಗಳಲ್ಲೂ ಸರ್ಕಾರ ನಿಗದಿಪಡಿಸಿರುವ ಮೂಲವೇತನ ನೀಡದೇ ವಂಚಿಸಲಾಗುತ್ತಿದೆ ಎಂದರು.
ಚಿಕ್ಕಮಗಳೂರು ನಗರದ ಸೆಂಟ್‌ಮೇರಿಸ್ ಶಿಕ್ಷಣ ಸಂಸ್ಥೆಯ ಚಿತ್ರಕಲಾ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜ್ಯೋತಿ ಎಂಬುವವರನ್ನು ಆಡಳಿತ ಮಂಡಳಿ ಕುಂಟು ನೆಪವೊಡ್ಡಿ ಕೆಲಸದಿಂದ ತೆಗೆದು ಹಾಕಿದೆ. ಶಿಕ್ಷಕಿ ಶಿಕ್ಷಣ ಇಲಾಖೆ ಅ ಧಿಕಾರಿಗಳು ಮತ್ತು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಇಲಾಖೆಯಿಂದ ಶಾಲೆಯ ಮುಖ್ಯಸ್ಥರಿಗೆ ಪತ್ರ ಬಂದಿದ್ದರೂ ಶಾಲಾ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಿಕ್ಷಣ ಇಲಾಖೆ ಅ ಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.
ಸರ್ಕಾರ ಮತ್ತು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ನಾಗೇಶ್, ಗೌರವಾಧ್ಯಕ್ಷ ಧಾರವಾಡದ ರಂಜನ್, ಶಿಕ್ಷಕಿ ಜ್ಯೋತಿ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ದಲಿತ್ ಸೇನಾ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಶ್ರೀರಾಮಸೇನೆಯ ಪುನೀತ್, ಪವನ್, ಸುನೀಲ್, ಸುಮಂತ್ ಸೇರಿದಂತೆ ಅನೇಕರು ಇದ್ದರು.