ಚಿಕ್ಕಮಗಳೂರು: ಜಿಲ್ಲಾದ್ಯಂತ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಶನಿವಾರ ಮತ್ತು ಭಾನುವಾರ ಕ್ಷೀಣಿಸಿದ್ದು ಜನಜೀವನ ಸಹಜಸ್ಥಿತಿಯತ್ತ ಮರಳುತ್ತಿದೆ. ಮಲೆನಾಡು ಮತ್ತು ಬಯಲುಸೀಮೆಯ ಕೆಲವು ಭಾಗದಲ್ಲಿ ಆಗಾಗ ಸಾಧಾರಣ ಮಳೆಯಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಬಿಸಿಲಿನಿಂದ ಕೂಡಿದ ವಾತಾವರಣವಿದೆ. ರೈತರು ಕೃಷಿ ಚಟುವಟಿಕೆ ಕಡೆ ಮುಖ ಮಾಡಿದ್ದಾರೆ.
ಮೂನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ರುದ್ರನರ್ತನ ಮಾಡಿದ್ದು ಅಪಾರ ನಷ್ಟವಾಗಿತ್ತು. ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು. ಸದ್ಯ ಜಿಲ್ಲಾದ್ಯಂತ ಮಳೆ ಕ್ಷೀಣಿಸಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು ಬಿಟ್ಟರೆ ಉಳಿದಂತೆ ಬಿಸಿಲು ಮೂಡಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆಯಲ್ಲಿ ಬಿಸಿಲಿನ ವಾತವರಣವಿತ್ತು. ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ನಿಷೇಧಿ ಸಿರುವ ಹಿನ್ನೆಲೆಯಲ್ಲಿ ಚಾರ್ಮಾಡಿಘಾಟಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು ಈಗಾಗಲೇ ಜಿಲ್ಲಾಡಳಿತ ರಾತ್ರಿ 7 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೂ ವಾಹನ ಸಂಚಾರವನ್ನು ನಿಷೇ ಧಿಸಿದೆ. ಸದ್ಯ ಮಳೆ ಕಡಿಮೆಯಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಭತ್ತದ ಗದ್ದೆ ಜಲಾವೃತ: ಅಪಾರ ಹಾನಿ: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ಹೇಮಾವತಿ ನದಿ ಹಳ್ಳ-ಕೊಳ್ಳಗಳು ಉಕ್ಕಿ ಹರಿದಿದ್ದು, ಈ ಭಾಗದ ಭತ್ತದ ಗದ್ದೆ ಜಲಾವೃತಗೊಂಡಿತ್ತು. ಇದರಿಂದ ಭತ್ತದ ಗದ್ದೆಗಳಲ್ಲಿ ಮರಳು ಸಂಗ್ರಹವಾಗಿ ರೈತರು ನಷ್ಟ ಅನುಭವಿಸಿದ್ದಾರೆ. ತಾಲೂಕಿನ ಭೈರಾಪುರ, ಹೊಸಕೆರೆ, ಊರುಬಗೆ ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಮಾಡಲಾಗಿತ್ತು. ಭಾರೀ ಮಳೆಯಿಂದ ಗದ್ದೆಗಳಿಗೆ ನೀರು ನುಗ್ಗಿ ಗದ್ದೆಗಳಲ್ಲಿ ಮರಳಿನ ರಾಶಿ ತುಂಬಿಕೊಂಡಿದೆ.
ಇದರಿಂದ ಭಾರೀ ನಷ್ಟವಾಗಿದ್ದು, ಕಂದಾಯ ಇಲಾಖೆ ಅ ಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡುವಂತೆ ಹೊಸಕೆರೆ ಗ್ರಾಮದ ರೈತ ಲಿಂಗಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ. ತಾಲೂಕಿನ ಹೊಸಕೆರೆ ಗ್ರಾಮದ ಜಗನ್ನಾಥ್ ಹಾಗೂ ಸೀತಮ್ಮ ದಂಪತಿ ವಾಸವಿದ್ದ ಮನೆ ಕಳೆದ ಬಾರಿ ಸಂಭವಿಸಿದ್ದ ಅತಿವೃಷ್ಟಿಗೆ ಭಾಗಶಃ ಹಾನಿಯಾಗಿತ್ತು. 50 ಸಾವಿರ ರೂ. ಪರಿಹಾರ ಮಾತ್ರ ನೀಡಲಾಗಿತ್ತು. ಮೊನ್ನೆ ಸುರಿದ ಭಾರೀ ಮಳೆಗೆ ಭಾಗಶಃ ಹಾನಿಯಾಗಿದ್ದ ಮನೆ ಸಂಪೂರ್ಣ ಕುಸಿದಿದೆ.
ಸದ್ಯ ಪಕ್ಕದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದು ಏನು ಮಾಡಬೇಕೆಂದು ತೋಚದಂತಾಗಿದೆ. ಕಳೆದ ಬಾರಿ ನೀಡಿದ 50 ಸಾವಿರ ರೂ. ಪರಿಹಾರದಲ್ಲಿ ಇಟ್ಟಿಗೆ ಮತ್ತು ಕಲ್ಲು ತರಿಸಿದ್ದು, ಪರಿಹಾರದ ಹಣ ಖಾಲಿಯಾಗಿದೆ. ಈ ಬಾರಿ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು ಕಂದಾಯ ಅಧಿ ಕಾರಿಗಳನ್ನು ಕೇಳಿದರೆ ಕಳೆದ ಬಾರಿ 50 ಸಾವಿರ ರೂ. ನೀಡಲಾಗಿದೆ. ಮತ್ತೆ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ. 50 ಸಾವಿರದಲ್ಲಿ ಹೊಸ ಮನೆ ನಿರ್ಮಿಸಿಕೊಳ್ಳುವುದು ಹೇಗೆ ಎಂದು ದಂಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.