ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಾರೀ ಗಾಳಿಯೊಂದಿಗೆ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.
ಕಳೆದೆರಡು ದಿನಗಳಿಂದ ಸ್ವಲ್ಪಮಟ್ಟಿಗೆ ಕ್ಷೀಣಿಸಿದ್ದ ಮಳೆ ಬುಧವಾರದಿಂದ ಮತ್ತೆ ತೀವ್ರತೆ ಪಡೆದುಕೊಂಡಿದ್ದು ಜಿಲ್ಲಾದ್ಯಂತ ಮೋಡಕವಿದ ವಾತಾವರಣವಿದ್ದು, ಗಾಳಿಯೊಂದಿಗೆ ತೀವ್ರ ಮಳೆಯಾಗುತ್ತಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ಭಾಗದಲ್ಲಿ ವ್ಯಾಪಕ ಮಳೆ ಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಈ ಭಾಗದ ಹಳ್ಳಕೊಳ್ಳ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಕಳಸ, ಹೊರನಾಡು, ಕುದುರೆ ಮುಖ, ಬಾಳೆಹೊಳೆ, ಮೂಡಿಗೆರೆ, ಬಾಳೂರು ಕೊಟ್ಟಿಗೆಹಾರ, ಜಾವಳಿ, ಚಾರ್ಮಾಡಿಘಾಟಿ ಬಣಕಲ್ ಸುತ್ತಮುತ್ತ ನಿರಂತರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯವಾಗಿದೆ.
ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಸುತ್ತಮುತ್ತ ಬಾರೀ ಮಳೆಯಾಗುತ್ತಿದೆ. ನರಸಿಂಹರಾಜಪುರ, ಬಾಳೆಹೊನ್ನೂರು, ಕೈಮರ, ಕೊಪ್ಪ ಜಯಪುರ, ನಾರ್ವೇ ಸುತ್ತಮುತ್ತ ಬಾರೀ ಮಳೆಯಾಗುತ್ತದೆ. ಮಳೆಗೆ ಬಾಳೆಹೊನ್ನೂರು ದೊಡ್ಡ ಮುಂಡುಗ ಸಮೀಪ ಸೇತುವೆ ಬಳಿ ಮಳೆನೀರಿಗೆ ಮಣ್ಣು ಕೊಚ್ಚಿ ಹೋಗಿದ್ದು ದೊಡ್ಡ ವಾಹನಗಳ ಸಂಚಾರ ಸ್ಥಗಿತ ಗೊಂಡಿದೆ. ಚಾರ್ಮಾಡಿ ಘಾಟಿ ಸುತ್ತಮುತ್ತ ಬಾರೀ ಮಳೆಯಾಗುತ್ತಿದ್ದು, ಮಳೆಯ ತೀವ್ರತೆಗೆ ಈ ಪ್ರದೇಶ ಸುತ್ತಮುತ್ತ ಮಂಜುಮುಸುಕಿದ ವಾತವರಣ ನಿರ್ಮಾಣವಾಗಿದೆ.
ಭದ್ರಾನದಿ ತುಂಬಿ ಹರಿಯುತ್ತಿದ್ದು ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಬಾಳೆಹೊಳೆ ಸೇತುವೆ ಮುಳುಗಲು ಕೆಲವೇ ಅಡಿಗಳು ಬಾಕಿ ಇದೆ. ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತ ಮೋಡಕವಿದ ವಾತಾವರಣವಿದ್ದು, ಆಗಾಗ್ಗೆ ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಕಡೂರು, ಬೀರೂರು, ತರೀಕೆರೆ ಭಾಗದಲ್ಲೂ ಮೋಡಕವಿದ ವಾತಾವರಣವಿದ್ದು, ಆಗಾಗ್ಗ ಮಳೆಯಾಗುತ್ತಿದೆ. ಮಳೆಯೊಂದಿಗೆ ಶೀತಗಾಳಿ ಬೀಸುತ್ತಿದ್ದು ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ನದಿಪಾತ್ರದಲ್ಲಿ ಜನ ಸಂಚರಿಸದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ನಿರಂತರ ಮಳೆಯ ನಡುವೆ ಕೃಷಿ ಚಟುವಟಿಕೆಯೂ ವೇಗ ಪಡೆದುಕೊಂಡಿದೆ.