Advertisement

ಗೋಸುಂಬೆ ರಾಜಕಾರಣದಿಂದ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿ : ರವಿ

09:28 PM Jul 18, 2021 | Team Udayavani |

ಚಿಕ್ಕಮಗಳೂರು: ಲಸಿಕಾ ರಾಜಕಾರಣದಂತ ಗೋಸುಂಬೆ ರಾಜಕಾರಣದಿಂದ ಕಾಂಗ್ರೆಸ್‌ ಇಂದು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಪಡೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಅಪಪ್ರಚಾರ ನಡೆಸಿದವರೂ ಇವರೇ. ಸಿದ್ಧರಾಮಯ್ಯ ಏನೆಂದು ಹೇಳಿದರು. ಡಿ.ಕೆ. ಶಿವಕುಮಾರ್‌ ಏನಂತ ಟ್ವೀಟ್‌ ಮಾಡಿದರು. ಜಾರ್ಖಂಡ್‌ ಆರೋಗ್ಯ ಸಚಿವರ ಹೇಳಿಕೆ ಇವನ್ನೆಲ್ಲ ನೆನಪು ಮಾಡಬೇಕಾ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ನವರ ಎಡಬಿಡಂಗಿತನ ಅರಿತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲರಿಗೂ ಉಚಿತ ಲಸಿಕೆ ಘೋಷಣೆ ಮಾಡಿದರು. ಈ ಕ್ರೆಡಿಟ್‌ ಪ್ರಧಾನಿಗೆ, ಬಿಜೆಪಿಗೆ ಹೋಗಬಹುದು ಎಂದು ಸುಪ್ರೀಂಕೋರ್ಟ್‌ ಕಡೆ ಬೊಟ್ಟು ಮಾಡಿದರು. ಕಾಂಗ್ರೆಸ್‌ನವರಿಗೆ ದೂರಲು ಮೋದಿ ಬೇಕು. ಒಳ್ಳೆಯದಕ್ಕೆ ಮೋದಿ ಬೇಡ ಎಂದರು.

ವಿಪಕ್ಷದಲ್ಲಿನ ಮುಖ್ಯಮಂತ್ರಿ ಸ್ಥಾನ ಪೈಪೋಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿ ಕಾರದಲ್ಲಿರುವ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಸಹಜ. ಎಲ್ಲಾ ಚುನಾವಣೆಗಳಲ್ಲಿ ಸೋತರೂ ಕಾಂಗ್ರೆಸ್‌ನಲ್ಲಿ ಹಲವರು ಇನ್ನೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಇದು ತಿರುಕನ ಕನಸು ಎಂದು ಹೇಳಬೇಕೋ, ಹೊಸ ಪದ ಹುಟ್ಟು ಹಾಕಬೇಕೋ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ತರುವ ಕುರಿತು ಚರ್ಚೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯ ರೂಪಿಸಬೇಕು. ಕಾಯ್ದೆ ಪರ ಜನಾಭಿಪ್ರಾಯ ಇದ್ದರೆ ರಾಜ್ಯದಲ್ಲೂ ಕಾಯ್ದೆ ಜಾರಿಗೆ ತರಲಿ. ಒತ್ತಾಯಪೂರ್ವಕವಾಗಿ ತರಲು ಇದು ತುರ್ತು ಪರಿಸ್ಥಿತಿಯಲ್ಲ ಎಂದು ಹೇಳಿದರು. ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ. ಬಂದೂಕಿನ ಮೊನೆಯಲ್ಲಿ ಬೆದರಿಸೋಕೆ ನಾವು ನಕ್ಸಲರಲ್ಲ, ನಾವು ಬ್ಯಾಲೆಟ್‌ ಪೇಪರ್‌ ಮೇಲೆ ನಂಬಿಕೆ ಇಟ್ಟಿದ್ದೇವೆ. ರಾಜ್ಯದಲ್ಲಿ ಜನಸಂಖ್ಯೆ ಏಳು ಕೋಟಿ ದಾಟಿದೆ. ದೇಶದಲ್ಲಿ 140 ಕೋಟಿ ದಾಟಿದೆ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಜನಾಭಿಪ್ರಾಯ ರೂಪುಗೊಂಡರೆ ಕಾಯ್ದೆ ಜಾರಿಗೆ ತರಲಿ ಎಂದರು.

Advertisement

ತುರ್ತು ಪರಿಸ್ಥಿತಿ ಅವ ಧಿಯಲ್ಲಿ ಇಂದಿರಾ ಗಾಂಧಿ , ಇಂದಿರಾ ಬ್ರಿಗೇಡ್‌ ಹೆಸರಿನಲ್ಲಿ ನಸ್‌ ಬಂದಿ ಕಾರ್ಯಕ್ರಮ ಮಾಡಿದರು. ಆಗ ಸಿದ್ಧರಾಮಯ್ಯ ಅವರು ಕಾಂಗ್ರೆಸ್‌ ಹಾಗೂ ಇಂದಿರಾ ಗಾಂಧಿ  ವಿರುದ್ಧ ಮಾತನಾಡುತ್ತಿದ್ದರು. ಡಿ.ಕೆ.ಶಿವಕುಮಾರ್‌ ಯುವ ಕಾಂಗ್ರೆಸ್‌ನಲ್ಲಿದ್ದರು.

ಯುವ ಕಾಂಗ್ರೆಸ್‌ನವರು ನಸ್‌ಬಂದಿ  ಮಾಡಿಸಿದ್ರೇ ಹುದ್ದೆ ಸಿಗುತ್ತಿತ್ತು. ಆಗ ಡಿ.ಕೆ. ಶಿವಕುಮಾರ್‌ ಎಷ್ಟು ನಸ್‌ಬಂದಿ  ಮಾಡಿಸಿದ್ರು ಎಂದು ಕೇಳಬೇಕು. ಆಗ ಸಿ.ಟಿ. ರವಿ ಹೇಳುತ್ತಿರುವುದು ಸರಿಯೋ ತಪ್ಪೋ ಗೊತ್ತಾಗುತ್ತದೆ ಎಂದ ಅವರು, ಒತ್ತಾಯಪೂರ್ವಕವಾಗಿ ಹೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಯಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next