Advertisement

ಮಳೆ ಅಬ ºರ: ಜನಜೀವನ ದುಸ್ತರ

10:25 PM Jul 16, 2021 | Team Udayavani |

ಚಿಕ್ಕಮಗಳೂರು: ಜಿಲ್ಲಾದ್ಯಂತ ಪುನರ್ವಸು ಮಳೆ ಅಬ್ಬರಿಸುತ್ತಿದ್ದು, ಗುರುವಾರ ಸುರಿದ ಮಳೆಗೆ ಮಲೆನಾಡಿನಲ್ಲಿ ರಸ್ತೆ, ಮನೆ, ಧರೆ ಕುಸಿದಂತಹ ಘಟನೆಗಳು ನಡೆದಿವೆ. ತುಂಗಾ, ಭದ್ರಾ, ಹೇಮಾವತಿ ನದಿ ನೀರಿನ ಹರಿವು ಹೆಚ್ಚುತ್ತಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಕಳಸ, ನರಸಿಂಹರಾಜಪುರ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಈ ಭಾಗದಲ್ಲಿ ಹರಿಯುವ ನದಿ, ಹಳ್ಳಕೊಳ್ಳ ಕರೆಕಟ್ಟೆಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ.

Advertisement

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು, ವಸ್ತಾರೆ, ಮುಳ್ಳಯ್ಯನಗಿರಿ, ಮುತ್ತೋಡಿ ಭಾಗದಲ್ಲಿ  ಹಾಗೆಯೇ ಕಡೂರು, ತರೀಕೆರೆ ಭಾಗದಲ್ಲೂ ಮಳೆಯಾಗುತ್ತಿದೆ. ಬುಧವಾರ ರಾತ್ರಿ ಸುರಿದ ಚಿಕ್ಕಮಗಳೂರು ತಾಲೂಕು ಹೊನ್ನಾಳ ಚೆಕ್‌ಪೋಸ್ಟ್‌ ಬಳಿ ಮುತ್ತೋಡಿ ಅಭಯಾರಣ್ಯ ಸಂಪರ್ಕಿಸುವ ರಸ್ತೆ ಕುಸಿದಿದ್ದು ವಾಹನ ಸಂಚಾರ ಸ್ತಬ್ಧಗೊಂಡಿದೆ. ಚಿಕ್ಕಮಗಳೂರು- ಮುತ್ತೋಡಿ ಸಂಪರ್ಕ ಸ್ಥಗಿತಗೊಂಡಿದೆ.

ಮೂಡಿಗೆರೆ ತಾಲೂಕು ಬೊಮ್ಮನಗದ್ದೆ ಗ್ರಾಮದಲ್ಲಿ ಭಾರೀ ಗಾಳಿ- ಮಳೆಗೆ ಮನೆ ಮೇಲೆ ಮರ ಬಿದ್ದು ಫೆಲಿಕ್ಸ್‌ ಎಂಬುವರ ಮನೆಗೆ ಹಾನಿಯಾಗಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಮನೆ ಮರ ತೆರವುಗೊಳಿಸಿದ್ದು, ಕಂದಾಯಾಧಿ ಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಸ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು ಭದ್ರಾನದಿ ತುಂಬಿ ಹರಿಯುತ್ತಿದೆ. ಕಳಸ- ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ.

ವಿವಿಧೆಡೆ ಗಾಳಿ- ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಧರೆ ಕುಸಿತಗೊಂಡು ಕೆಲವು ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಚಿಕ್ಕಮಗಳೂರು ನಗರ ಸೇರಿದಂತೆ ಕಡೂರು, ತರೀಕೆರೆ ಭಾಗದಲ್ಲೂ ಉತ್ತಮ ಮಳೆಯಾಗಿದ್ದು ಮಧ್ಯಾಹ್ನದ ನಂತರ ಮೋಡ ಕವಿದ ವಾತವರಣ ನಿರ್ಮಾಣವಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು ನಿರಂತರ ಸುರಿಯುತ್ತಿರುವ ಮಳೆಯಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿರುವ ಜಲಪಾತಗಳಲ್ಲಿನ ನೀರು ಭಾರೀ ಪ್ರಮಾಣದಲ್ಲಿ ಧುಮ್ಮಿಕ್ಕುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಒಟ್ಟಾರೆ ನಿರಂತರ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next