ಚಿಕ್ಕಮಗಳೂರು: ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮೋಡ ಕವಿದ ವಾತವರಣ ನಿರ್ಮಾಣವಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಯಾಗುತ್ತಿದ್ದು, ನದಿ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಬಯಲುಸೀಮೆ ಭಾಗದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಸಾಧಾರಣ ಮಳೆಯಾಗುತ್ತಿದೆ.
ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಪುನರ್ವಸು ಮಳೆ ಜಿಲ್ಲೆಯಲ್ಲಿ ಚುರುಕುಗೊಂಡಿದ್ದು, ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಚಿಕ್ಕಮಗಳೂರು ಸುತ್ತಮುತ್ತ ನಿರಂತರ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಈ ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ.
ಕೆರೆಕಟ್ಟೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಶೀತಗಾಳಿಯೊಂದಿಗೆ ಸಾಧಾರಣ ಮಳೆಯಾಗುತ್ತಿದೆ. ಜೂನ್ ತಿಂಗಳ ಮಧ್ಯದಲ್ಲಿ ಅಬ್ಬರಿಸಿದ್ದ ಮಳೆರಾಯ ಮಧ್ಯದಲ್ಲಿ ಮಾಯವಾಗಿದ್ದ, ಜುಲೈ ತಿಂಗಳ ಆರಂಭದಲ್ಲಿ ಮಳೆ ಬಿರುಸು ಪಡೆದುಕೊಳ್ಳುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ಭತ್ತದ ಗದ್ದೆಗಳ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸಸಿಮಡಿಯನ್ನು ಹಾಕಲಾಗಿದೆ. ಬೇಸಾಯಕ್ಕೆ ಎಲ್ಲಾ ಸಿದ್ಧತೆಯಲ್ಲಿ ರೈತರು ಮಗ್ನರಾಗಿದ್ದಾರೆ.
ಅಡಿಕೆ ಹಾಗೂ ಕಾμತೋಟಗಳಿಗೆ ಔಷಧ ಸಿಂಪಡಣೆ ಕಾರ್ಯ ಭರದಿಂದ ಸಾಗುತ್ತಿದೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ ಬಯಲು ಸೀಮೆಭಾಗದಲ್ಲಿ ಈಗಾಗಲೇ ಆಲೂಗಡ್ಡೆ ಬಿತ್ತನೆ ಕಾರ್ಯ ಮುಗಿದಿದ್ದು, ಸಕಾಲಕ್ಕೆ ಮಳೆಯಾಗಿದ್ದು, ಆಲೂಗಡ್ಡೆ ಜತೆಗೆ ಮೆಣಸಿನ ಕಾಯಿ, ಕೋಸು, ಬಟಾಣಿ, ಬೀನ್ಸ್, ಬೀಟ್‌ರೋಟ್ ಮತ್ತು ಕ್ಯಾರೆಟ್ ಬೆಳೆಗಳಿಗೂ ಮರು ಜೀವ ಬಂದಂತಾಗಿದೆ. ಕಡೂರು ತಾಲೂಕಿನಲ್ಲಿ ಈರುಳ್ಳಿ ಹತ್ತಿ, ಎಳ್ಳು ಹೆಸರು ಉದ್ದು ಶೇಂಗಾ ರಾಗಿ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ತರೀಕೆರೆ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಸಕಾಲಕ್ಕೆ ಮಳೆಯಾಗುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಮಂಗಾರು ಪೂರ್ವ ಮತ್ತು ಈಗ ಹದಮಳೆಯಾಗುತ್ತಿರುವುದರಿಂದ ತರಕಾರಿ ಬೆಳೆಗೆ ಈ ಮಳೆ ವರದಾನವಾಗಿದೆ. ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಜನಜೀವನ ಅಸ್ತವ್ಯಸ್ತ: ಮಲೆನಾಡು ಭಾಗದಲ್ಲಿ ಮಳೆ ಬಿರುಸುಗೊಂಡಿದ್ದು ನಿರಂತರವಾಗಿ ಮಳೆಯಾಗುತ್ತಿದೆ. ಇದರೊಂದಿಗೆ ಮೋಡಕವಿದ ವಾತವರಣ ಮತ್ತು ಶೀತಗಾಳಿ ಬೀಸುತ್ತಿದ್ದು, ಜನರು ಮನೆಯಿಂದ ಹೊರಬರದಂತಾಗಿದೆ.
ಜಿಲ್ಲಾದ್ಯಂತ ಸುರಿದ ಮಳೆ ವಿವರ: ಚಿಕ್ಕಮಗಳೂರು ಕಸಬಾ 4.2,ಮಿ.ಮೀ. ಜೋಳದಾಳ್ 29, ಅತ್ತಿಗುಂಡಿ 41, ಸಂಗಮೇಶ್ವರ ಪೇಟೆ 22, ಕಳಸಾಪುರ 7.1, ಆಲ್ದೂರು 27, ಬ್ಯಾರುವಳ್ಳಿ 28, ಕೆ.ಆರ್.ಪೇಟೆ 19.1, ದಾಸರ ಹಳ್ಳಿ 9.2, ಮಳಲೂರು 24.1, ವಸ್ತಾರೆ 23, ಕಡೂರು 13, ಬೀರೂರು 14.6, ಸಖರಾಯಪಟ್ಟಣ 37.3, ಸಿಂಗಟಗೆರೆ 13, ಪಂಚನಹಳ್ಳಿ 12.6, ಎಮ್ಮೆದೊಡ್ಡಿ 20.2, ಯಗಟಿ 12.6, ಗಿರಿಯಾಪುರ 28, ಬಾಸೂರು 16.2, ಕೊಪ್ಪ 103, ಹರಿಹರಪುರ 84, ಜಯಪುರ 65.4, ಬಸರಿಕಟ್ಟೆ 76.3, ಕಮ್ಮರಡಿ 112.8, ಮೂಡಿಗೆರೆ 17.6, ಕೊಟ್ಟಿಗೆಹಾರ 48, ಗೋಣಿಬೀಡು 29.1, ಜಾವಳಿ 52.4, ಕಳಸ 56, ಹಿರೇಬೈಲು 60, ಹೊಸಕೆರೆ 137 ಬಾಳೂರು 61.2, ನರ ಸಿಂಹರಾಜಪುರ 72, ಬಾಳೆಹೊನ್ನೂರು 36, ಮೇಗರಮಕ್ಕಿ 55, ಶೃಂಗೇರಿ 70 ಕಿಗ್ಗ 128.4, ತರೀಕೆರೆ 32, ಲಕ್ಕವಳ್ಳಿ36.2, ರಂಗೇನಹಳ್ಳಿ 36, ಲಿಂಗದಹಳ್ಳಿ 24.8, ಉಡೇವಾ 26.5, ತ್ಯಾಗದಬಾಗಿ 30, ತಣಿಗೆಬೈಲು 29.8, ಹುಣಸಘಟ್ಟ 44, ಅಜ್ಜಂಪುರ 32, ಶಿವನಿ 19, ಬುಕ್ಕಾಂಬುದಿ 19 ಮತ್ತು ಚೌಳಹಿರಿಯೂರಿನಲ್ಲಿ 2.4 ಮಿ.ಮೀ. ಮಳೆಯಾಗಿದೆ.