ಚಿಕ್ಕಮಗಳೂರು: ನಗರದಲ್ಲಿ ಬೆಳ್ಳಂ ಬೆಳಗ್ಗೆಯೇ ಗಜರಾಜ ಪ್ರತ್ಯಕ್ಷವಾಗಿದ್ದು ನಗರದ ಜನತೆಯಲ್ಲಿ ಆಶ್ಚರ್ಯ ಮತ್ತು ಕೆಲ ಸಮಯ ಆತಂಕ ಸೃಷ್ಟಿಸಿತು. ಇಷ್ಟು ದಿನ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳು ನಗರದಲ್ಲಿ ಕಾಣಿಸಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿವೆ.
ಸೋಮವಾರ ಬೆಳಗ್ಗೆ ಚಿಕ್ಕಮಗಳೂರು ನಗರ ಸಮೀಪದ ನಲ್ಲೂರು ಗುಡ್ಡದ ಅರಣ್ಯ ಪ್ರದೇಶದಿಂದ ಬಂದ ಒಂಟಿ ಸಲಗ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿದ್ದು ಇದು ಕಾಡಾನೆಯೋ, ಸಾಕಾನೆಯೋ ಎಂಬ ಗೊಂದಲಕ್ಕೆ ಬಿದ್ದ ಸಾರ್ವಜನಿಕರು ಆತಂಕಕ್ಕೆ ಒಳಗಾದರು. ನಲ್ಲೂರು ಅರಣ್ಯ ಪ್ರದೇಶದಿಂದ ಭಾನುವಾರ ರಾತ್ರಿ ಬಂದ ಒಂಟಿ ಸಲಗ ರಾತ್ರಿ ಇಡೀ ನಗರ ಸಮೀಪದ ಗದ್ದೆ, ಕಬ್ಬಿನ ಗದ್ದೆಗಳಲ್ಲಿ ಸಂಚರಿಸಿದೆ.
ಸೋಮವಾರ ಮುಂಜಾನೆ ನಗರ ಪ್ರದೇಶಕ್ಕೆ ಆಗಮಿಸಿದೆ. ಮುಂಜಾನೆ 4 ರಿಂದ 5ಗಂಟೆ ವೇಳೆ ನಗರದ ಜಯನಗರ ಬಡಾವಣೆ ಮುಖ್ಯರಸ್ತೆಯಲ್ಲಿ ಕಾಡಾನೆ ಸಂಚರಿಸಿದ್ದು, ಬೀದಿನಾಯಿಗಳು ಒಂದೇ ಸಮನೆ ಬೊಗಳಲಾರಂಭಿಸಿವೆ. ಇದರಿಂದ ಬೆದರಿದ ಕಾಡಾನೆ ಎಲ್ಲೆಂದರಲ್ಲಿ ಸಂಚರಿಸಿದೆ. 6ಗಂಟೆ ವೇಳೆಗೆ ಜಯನಗರ ಬಡಾವಣೆಯಿಂದ ಕೆ.ಎಂ. ರಸ್ತೆಗೆ ಆಗಮಿಸಿದೆ. ರಸ್ತೆ ಮಧ್ಯೆ ಸಂಚರಿಸುತ್ತಿದ್ದ ಆನೆಯನ್ನು ಕಂಡ ಕೆಲ ಸಾರ್ವಜನಿಕರು ಇದು ಸಾಕಿದ ಆನೆ ಎಂದು ಭಾವಿಸಿದ್ದಾರೆ. ಆನೆ ಗಲಿಬಿಲಿಗೊಂಡಿದ್ದನ್ನು ಕಂಡ ಕೆಲವರು ಕಾಡಾನೆ ಎಂದು ಖಾತ್ರಿಪಡಿಸಿಕೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಾಹನ ಸಂಚಾರದ ನಡುವೆಯೇ ಕೆ.ಎಂ. ರಸ್ತೆಯಿಂದ ಕಾಫಿ ಉದ್ಯಮಿ ದಿ| ಸಿದ್ದಾರ್ಥ ಹೆಗ್ಡೆ ಮಾಲೀಕತ್ವದ ಎಸಿಬಿ ಕಂಪನಿಯ ಗೇಟ್ ಮೂಲಕ ಕಂಪನಿ ಆವರಣವನ್ನು ಪ್ರವೇಶಿಸಿದೆ. ಕೆಲ ಸಮಯ ಅಲ್ಲೆ ಇದ್ದ ಕಾಡಾನೆ ಎಬಿಸಿ ಕಂಪೆನಿ ಹಿಂಬದಿಯಿಂದ ಮತ್ತೆ ನಲ್ಲೂರು ಕಡೆಗೆ ಸಂಚರಿಸಿದೆ. ಕಾಡಾನೆ ನಗರ ಪ್ರದೇಶಿಸಿದ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸಿ ಓಡಿಸಿದ್ದಾರೆ.
ಮತ್ತೆ ಗದ್ದೆಗಳಲ್ಲಿ ಸಂಚರಿಸಿದ ಕಾಡಾನೆ ನಲ್ಲೂರು ಗುಡ್ಡದತ್ತ ಸಾಗಿದೆ. ಅಲ್ಲಿಂದ ಉಂಡೇದಾಸರಹಳ್ಳಿ, ಕಲ್ಲದೇವರಹಳ್ಳಿ ಗ್ರಾಮಗಳತ್ತ ತೆರಳಿದ ಆನೆ ಯರೇಹಳ್ಳಿ ಗ್ರಾಮದ ಕಾಡಿನಲ್ಲಿ ಕಣ್ಮರೆಯಾಗಿದೆ. ರಾತ್ರಿ ವೇಳೆ ಮತ್ತೆ ಕಾಡಾನೆ ನಗರದತ್ತ ಮರಳುವ ಸಾಧ್ಯತೆ ಇದ್ದು ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ವೇಲೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆನೆ ಕೆ.ಎಂ. ರಸ್ತೆಯನ್ನು ದಾಟಿ ಎಬಿಸಿ ಕಂಪನಿಯ ಆವರಣಕ್ಕೆ ತೆರಳಿದೆ.
ಒಂದು ವೇಳೆ ಎಬಿಸಿ ಆವರಣದೊಳಕ್ಕೆ ಹೋಗದೆ ಸೀದಾ ರಸ್ತೆಯಲ್ಲೆ ಬಂದಿದ್ದರೇ ಜನನಿಬಿಡ ಪ್ರದೇಶಕ್ಕೆ ಬರುತ್ತಿತ್ತು. ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.