ಚಿಕ್ಕಮಗಳೂರು: ಕೋವಿಡ್ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ತೇರ್ಗಡೆಗೊಳಿಸಿದ್ದು ಆನ್‌ಲೈನ್ ತರಗತಿಗಳು ಆರಂಭವಾಗಿವೆ. ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ಸಕಾಲಕ್ಕೆ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹೊಂದಿಸುವುದೇ ದೊಡ್ಡ ಸವಾಲಾಗಿದೆ.
ಜಿಲ್ಲೆ ಶೈಕ್ಷಣಿಕವಾಗಿ 8 ವಲಯಗಳನ್ನು ಹೊಂದಿದ್ದು ಕಳೆದ ವರ್ಷ 1,44,518 ವಿದ್ಯಾರ್ಥಿಗಳಿದ್ದರು. ಸದ್ಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ತೇರ್ಗಡೆಗೊಳಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಆನ್‌ಲೈನ್ ಪಾಠ- ಪ್ರವಚನಗಳನ್ನು ನಡೆಸಲಾಗುತ್ತಿದೆ.
ಜು.1ರಿಂದ ಆನ್‌ಲೈನ್ ಪಾಠ ಆರಂಭವಾಗಿದ್ದು, ಮಕ್ಕಳ ಕೈಯಲ್ಲಿ ಪಠ್ಯಪುಸ್ತಕಗಳು ಇಲ್ಲದಿರುವುದು ಪೋಷಕರನ್ನು ಕಾಡುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಪಠ್ಯಪುಸ್ತಕಗಳನ್ನು ರಾಜ್ಯ ಸರ್ಕಾರ ಪೂರೈಕೆ ಮಾಡಲು ವಿಳಂಬವಾಗಿದ್ದು, ಹಳೆಯ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿ ತಿಂಗಳಾದರೂ ಜಿಲ್ಲೆಯಲ್ಲಿ ಶೇ.60 ರಿಂದ 70ರಷ್ಟು ಹಳೆಯ ಪಠ್ಯಪುಸ್ತಕಗಳು ಮರಳಿ ಸಿಗುತ್ತಿದ್ದು ಉಳಿದ ಪುಸ್ತಕಗಳ ಕೊರತೆ ಅನುಭವಿಸುವಂತಾಗಿದೆ. ಅನೇಕ ವಿದ್ಯಾರ್ಥಿಗಳು ಪಠ್ಯಪುಸ್ತಕವಿಲ್ಲದೆ ಪಾಠ- ಪ್ರವಚನ ಕೇಳುವಂತಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆ ಮಾಡಲು ವಿಳಂಬವಾಗುತ್ತಿದ್ದು, 2021ನೇ ಸಾಲಿನಲ್ಲಿ ಪೂರೈಕೆ ಮಾಡಿದ ಪುಸ್ತಕಗಳನ್ನು ಬಳಸುವಂತೆ ಕರ್ನಾಟಕ ಪುಸ್ತಕ ಸಂಘ ಆದೇಶಿಸಿದೆ. ಹೀಗಾಗಿ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟದ ದಿನಸಿ ವಿತರಿಸುವಾಗ ಹಿಂದಿನ ವರ್ಷ ಕೊಟ್ಟಿದ್ದ ಪುಸ್ತಕಗಳನ್ನು ಮರಳಿ ಪಡೆಯಲಾಗುತ್ತಿದೆ. ಈ ವೇಳೆ ಹರಿದ ಪುಸ್ತಕಗಳೇ ಹೆಚ್ಚು ವಾಪಸಾಗುತ್ತಿರುವುದು ಕಂಡು ಬಂದಿದ್ದರೆ, ಮತ್ತೂಂದೆಡೆ ಪುಸ್ತಕಗಳನ್ನು ಕಳೆದುಕೊಂಡಿದ್ದು ಪೋಷಕರು ಹಾಗೂ ಶಿಕ್ಷಕರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ.
ಶಿಕ್ಷಣ ಇಲಾಖೆಯಿಂದ ಸರ್ಕಾರಿ ಅನುದಾನಿತ ಶಾಲೆಗಳಿಗೆ ಪೂರೈಕೆಯಾಗುವ ಪುಸ್ತಕಗಳು ಒಮ್ಮೆ ಬಳಕೆಗೆ ಯೋಗ್ಯವಾಗುವ ರೀತಿಯಲ್ಲಿವೆ. ಆದರೆ ಒಂದರಿಂದ ಏಳನೇ ತರಗತಿವರೆಗಿನ ಪುಸ್ತಕದಲ್ಲಿ ಪಾಠದ ಕೊನೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುವ ವ್ಯವಸ್ಥೆ ಇದೆ. ಹಳೆಯ ಪುಸ್ತಕಗಳನ್ನು ಪಡೆಯುವ ಈ ವರ್ಷದ ವಿದ್ಯಾರ್ಥಿಗಳಿಗೆ ಬರವಣಿಗೆ ರೂಢಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಹಿಂದಿನ ವರ್ಷದ ಪ್ರಾಥಮಿಕ ತರಗತಿಯ 1, 2, 3ನೇ ತರಗತಿಯ ಪುಸ್ತಕಗಳನ್ನು ವಿದ್ಯಾರ್ಥಿಗಳು ಬಹುತೇಕ ಹರಿದು ಹಾಕಿ ಕೊಂಡಿದ್ದಾರೆ.
ಒಂದನೇ ತರಗತಿಗೆ ದಾಖಲಾಗುವ ಮತ್ತು ಎರಡು ಮೂರನೇ ತರಗತಿಗೆ ಬಡ್ತಿ ಪಡೆದ ಮಕ್ಕಳಿಗೆ ಈ ವರ್ಷ ಪುಸ್ತಕ ಹೊಂದಿಸುವುದು ದೊಡ್ಡ ಸವಾಲಾಗಿದೆ. ಒಟ್ಟಾರೆ ಸರ್ಕಾರ ಪಠ್ಯಪುಸ್ತಕ ಪೂರೈಕೆ ವಿಳಂಬ ಮಾಡಿರುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.