ಕಡೂರು: ಕೋವಿಡ್ ಎರಡನೆ ಅಲೆಯಲ್ಲಿ ನೊಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ಮೂಲಕ ನೋಂದಾಯಿತ ಕಾರ್ಮಿಕ ವರ್ಗಕ್ಕೆ ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ಆಹಾರ ಕಿಟ್ ವಿತರಣೆ ವೇಳೆ ನೂಕುನುಗ್ಗಲು ಏರ್ಪಟ್ಟು ನಂತರ ಪೊಲೀಸ್ ಭದ್ರತೆಯಲ್ಲಿ ವಿತರಣೆ ಸಾಂಗವಾಗಿ ನಡೆಯಿತು.
ತಾಲೂಕಿನಲ್ಲಿ 14,800 ನೋಂದಾಯಿತ ಕಾರ್ಮಿಕರಿದ್ದು ಶನಿವಾರ ಶಾಸಕ ಬೆಳ್ಳಿಪ್ರಕಾಶ್ ಅವರು ಸಾಂಕೇತಿಕವಾಗಿ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿದ್ದರು. ನಂತರ ಇಲಾಖೆಯ ಅಧಿ ಕಾರಿ ಮತ್ತು ಸಿಬ್ಬಂದಿ ವರ್ಗದವರು ಸುಮಾರು 1,178ಕ್ಕೂ ಹೆಚ್ಚಿನ ಕಾರ್ಮಿಕರಿಗೆ ಕಿಟ್ ನೀಡಿದ್ದರು.
ನಂತರ ಬೀರೂರು ಪಟ್ಟಣದಲ್ಲಿ 1,100ಕ್ಕೂ ಹೆಚ್ಚಿನ ಕಾರ್ಮಿಕರಿಗೆ ಕಿಟ್ ವಿತರಿಸಲಾಗಿತ್ತು. ಆದರೆ ಮಂಗಳವಾರ ಕಾರ್ಮಿಕರಿಗೆ ವಾರದ ರಜೆ ಇದ್ದ ಕಾರಣ ಕಾರ್ಮಿಕರು ಎಪಿಎಂಸಿಯಲ್ಲಿ 500ಕ್ಕೂ ಹೆಚ್ಚಿನ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಇಲ್ಲದೆ ವಿತರಣೆ ನಡೆದಿತ್ತು. ಏಕಾಏಕಿ ಕಾರ್ಮಿಕರಲ್ಲಿ ನೂಕುನುಗ್ಗಲು ಉಂಟಾಗಿ ಕಿಟ್ ಸಿಗತ್ತದೆಯೋ ಇಲ್ಲವೋ ಎಂಬ ಗೊಂದಲ ಏರ್ಪಟ್ಟು ವಿತರಣೆ ಸ್ಥಳಕ್ಕೆ ನುಗ್ಗಲು ಆರಂಭಿಸಿದರು.
ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಗೋಡೌನ್‌ಗೆ ಬೀಗ ಹಾಕಿಸಿ ಅಧಿ ಕಾರಿಗಳನ್ನು ಸ್ಥಳದಿಂದ ತೆರಳಲು ತಿಳಿಸಿದರು. ನಂತರ ಸ್ಥಳದಲ್ಲಿದ್ದ ಕಾರ್ಮಿಕರಿಗೆ ಪೊಲೀಸರು ಎಚ್ಚರಿಕೆ ನೀಡಿ ಎಲ್ಲರಿಗೂ ಕಿಟ್‌ಗಳನ್ನು ನೀಡಲಾಗುತ್ತದೆ. ಯಾವುದೇ ಗೊಂದಲಕ್ಕೆ ಒಳಗಾಗದಂತೆ ಮನವಿ ಮಾಡಿದರು. ನಂತರ ಅಧಿ ಕಾರಿಗಳನ್ನು ಸ್ಥಳಕ್ಕೆ ಕರೆಸಿ ಪುನಃ ಕಿಟ್ ವಿತರಣೆ ಕಾರ್ಯ ನಡೆಯಲು ಅನುವು ಮಾಡಿಕೊಟ್ಟರು.
ಕಾರ್ಮಿಕ ಅಧಿಕಾರಿ ಶಶಿಕಲಾ ಅವರು ಕಾರ್ಮಿಕರಲ್ಲಿ ಮನವಿ ಮಾಡಿ, ಯಾವುದೇ ಗೊಂದಲ, ಗಾಳಿಸುದ್ದಿ, ಕಿವಿಮಾತುಗಳಿಗೆ ಕಿವಿಗೊಡದೆ ನಿಮ್ಮ ದಾಖಲೆಗಳನ್ನು ನೀಡಿ ಕಿಟ್ ಪಡೆಯಿರಿ ಎಂದು ಸೂಚಿಸಿದರು. 1,865 ಕಾರ್ಮಿಕರಿಗೆ ಕಿಟ್ ವಿತರಣೆ ನಡೆದಿದ್ದು ಗುರುವಾರ ಪುನಃ ನೀಡಲಾಗುತ್ತದೆ ಎಂದ ಮಾಹಿತಿ ನೀಡಿದರು.
ವೃತ್ತ ನಿರೀಕ್ಷಕ ಮಂಜುನಾಥ್, ಕಡೂರು ಪಿಎಸ್‌ಐ ರಮ್ಯಾ ಮತ್ತು ಸಿಬ್ಬಂದಿ ವರ್ಗದವರ ರಕ್ಷಣೆಯಲ್ಲಿ ಕಿಟ್ ವಿತರಣೆ ನಡೆಯಿತು.