ಚಿಕ್ಕಮಗಳೂರು: ನಗರದಲ್ಲಿ ಪಾರ್ಕ್‌ಗಳು ಹಾಗೂ ರಸ್ತೆ ಜಾಗ ಒತ್ತುವರಿ ಮಾಡಿಕೊಂಡಿರುವವರು ಇನ್ನು ಮೂರು- ನಾಲ್ಕು ದಿನಗಳಲ್ಲಿ ತೆರವು ಮಾಡದಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗುವುದು ಎಂದು ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.
ನಗರದ ಕಲ್ಯಾಣ ನಗರ ಬೈಪಾಸ್ ರಸ್ತೆಯ ವೀರಶೈವ, ಲಿಂಗಾಯಿತ ರುದ್ರಭೂಮಿಯನ್ನು ನಗರಸಭೆ, ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ನಿರಾಶ್ರಿತರ ಶಿಬಿರದ ನಿವಾಸಿಗಳು ಹಾಗೂ ವೀರಶೈವ ಸಮಾಜದ ಪದಾಧಿ ಕಾರಿಗಳೊಂದಿಗೆ ಸ್ವತ್ಛತಾ ಕಾರ್ಯ ಕೈಗೊಂಡು ನಂತರ ಅವರು ಮಾತನಾಡಿದರು. ಒತ್ತುವರಿದಾರರಿಗೆ ಅನೇಕ ಬಾರಿ ಸೂಚನೆ ಕೊಟ್ಟರೂ ಹಾಗೇ ಉಳಿಸಿಕೊಂಡಿದ್ದಾರೆ. ಪಾರ್ಕ್, ರಸ್ತೆ ಜಾಗವನ್ನು ಇನ್ನೂ ಕೆಲವರು ತೆರವು ಮಾಡಿಲ್ಲ. ಇದು ಅವರಿಗೆ ಅಂತಿಮ ಎಚ್ಚರಿಕೆ. ಇದಕ್ಕೂ ಸ್ಪಂದಿಸದೇ ಇದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಿ ಅದಕ್ಕೆ ತಗುಲುವ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲಾಗುವುದು ಎಂದರು.
ಮನೆಗಳ ಮುಂದೆ ರಸ್ತೆಗೆ ಬೇಲಿ ಹಾಕಿಕೊಂಡು ವಾಹನ ನಿಲುಗಡೆ ಮತ್ತು ಜನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಹಲವು ಪ್ರಕರಣಗಳಿವೆ. ಇದಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಲಯ ಸಹ ಹೇಳಿದೆ. ಈ ಬಗ್ಗೆ ಸುಮಾರು ಹತ್ತು ಬಾರಿ ನಗರಸಭೆಯಿಂದ ಎಚ್ಚರಿಕೆ ನೀಡಲಾಗಿದೆ ಎಂದರು. ಕೆಲವರು ಒತ್ತುವರಿ ತೆರವು ಮಾಡಿದ್ದರೂ, ಇನ್ನೂ ಕೆಲವರು ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಇದು ಅವರಿಗೆ ಕೊನೆಯ ಎಚ್ಚರಿಕೆ. ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಅವರು ತಮ್ಮ ಮನೆಗಳ ಮುಂದೆ ರಸ್ತೆಗೆ ಅಡ್ಡಲಾಗಿ ಬೇಲಿ, ಗಿಡಗಳನ್ನು ಹಾಕಿದ್ದರೆ ತೆರವು ಮಾಡಿಕೊಡಬೇಕು. ಇಲ್ಲವಾದಲ್ಲಿ ಸಿಡಿಎ ಮತ್ತು ನಗರಸಭೆಯಿಂದ ತೆರವು ಮಾಡಿ ಕಂದಾಯದ ರೂಪದಲ್ಲಿ ದಂಡವನ್ನು ವಸೂಲಿ ಮಾಡಲಾಗುವುದು ಎಂದರು.
ಮಾಸ್ಕ್ ಧರಿಸದವರಿಗೆ ಮೂರ್‍ನಾಲ್ಕು ದಿನಗಳಿಂದ ದಂಡ ವಿ ಧಿಸುವುದನ್ನು ಹೆಚ್ಚಿಸಲಾಗಿದೆ. ಪ್ರತಿ ದಿನ 4 ರಿಂದ 5 ಸಾವಿರ ರೂ. ದಂಡ ವಸೂಲಾಗುತ್ತಿದೆ. ಕೆಲವರು ಬೆಳಗಿನ ವೇಳೆ ಮಾಸ್ಕ್ಗಳನ್ನು ಜೇಬಿನಲ್ಲಿಟ್ಟುಕೊಂಡು ವಾಕಿಂಗ್ ಬರುತ್ತಾರೆ. ನಾಲ್ಕೈದು ಜನರು ಒಟ್ಟಿಗೆ ಇರುತ್ತಾರೆ. ಕಡ್ಡಾಯವಾಗಿ ಮನೆಯಿಂದ ಬರುವಾಗಲೇ ಮಾಸ್ಕ್ಧರಿಸಬೇಕು. ಇದನ್ನು ನಿರ್ಲಕ್ಷಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.
ನಗರದಲ್ಲಿ ಪಾರ್ಕ್‌ಗಳು ಸೇರಿ ಹಲವು ಪ್ರದೇಶಗಳಲ್ಲಿ ಸ್ವತ್ಛತೆ ಕೈಗೊಳ್ಳಬೇಕಿದೆ. ರುದ್ರಭೂಮಿ ಸ್ವತ್ಛತೆಯನ್ನು ಆದ್ಯತೆಯಾಗಿ ಕೈಗೆತ್ತಿಕೊಂಡಿದ್ದೇವೆ. ಇದುವರೆಗೆ ಕೊರೊನಾ ಇದ್ದ ಕಾರಣ ಪಾಕ್ ìಗಳು, ರುದ್ರಭೂಮಿಗಳ ಸ್ವತ್ಛತೆ, ನಿರ್ವಹಣೆ ಕಷ್ಟವಾಗಿತ್ತು. ಮುಂದೆ ಪ್ರತಿ 15 ದಿನಗಳಿಗೊಮ್ಮೆ ಎಲ್ಲರ ಸಹಕಾರ ಪಡೆದು ಸ್ವತ್ಛತೆ ಮಾಡಲಾಗುವುದು ಎಂದು ತಿಳಿಸಿದರು.
ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ರೂಬೆನ್ ಮೋಸೆಸ್ ಮಾತನಾಡಿ, ಮನುಷ್ಯ ಎಂದಿಗೂ ಸ್ವಾರ್ಥಿ ಆಗಬಾರದು. ಇಲ್ಲಿ ಜಾತಿ ಮುಖ್ಯವಲ್ಲ. ಯಾವುದೇ ಜಾತಿಯ ರುದ್ರಭೂಮಿಯಾದರೂ ಸರಿ ಸ್ವತ್ಛವಾಗಿರಬೇಕು ಎಂದರು.
ವೀರಶೈವ, ಲಿಂಗಾಯತ ಸಮಾಜದ ಮುಖಂಡ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ಕಲ್ಯಾಣ ನಗರದ 5 ಎಕರೆ ರುದ್ರಭೂಮಿಯನ್ನು ಮಳೆ ಮತ್ತು ಕೋವಿಡ್ ಕಾರಣ ಸ್ವತ್ಛತೆ ಕಾಪಾಡಲು ಸಾಧ್ಯವಾಗಿರಲಿಲ್ಲ. ಸಮಾಜದ ಕೋರಿಕೆ ಮೇರೆಗೆ ನಗರಸಭೆ, ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ ಸ್ವತ್ಛತೆಗೆ ಕೈಜೋಡಿಸಿರುವುದು ಖುಷಿ ಕೊಟ್ಟಿದೆ ಎಂದರು.
ಸಮಾಜದ ಉಪಾಧ್ಯಕ್ಷ ರೇಣುಕಾರಾಧ್ಯ, ಕಾರ್ಯದರ್ಶಿ ನಂದೀಶ್, ನಿರ್ದೇಶಕ ಸಿರಿಮನೆ ಪ್ರಸಾದ್, ವ್ಯವಸ್ಥಾಪಕ ಮಂಜು, ಜಗದೀಶ್ ಬಾಬು, ಮಧುಕುಮಾರ್ ನಗರಸಭೆ ಇಂಜಿನಿಯರ್ ಚಂದನ್, ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ನಿರ್ದೇಶಕ ಸಿಲ್ವಸ್ಟರ್, ರೋನಿ, ಸಂಜು, ಟೋನಿ, ಮಂಜುನಾಥ್, ಗುರು ಇದ್ದರು.