Advertisement

ಇಂದಿನಿಂದ ಕೆಲ ನಿರ್ಬಂಧ ಸಡಿಲಿಕೆ: ಡಿಸಿ ಕೆ.ಎನ್‌. ರಮೇಶ್‌

10:11 PM Jul 05, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಜು.5ರಿಂದ ಜು.19ರ ವರೆಗೂ ಕೆಲವು ನಿರ್ಬಂಧಗಳನ್ನು ಸಡಿಲಿಸಿ ಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌ ಆದೇಶ ಹೊರಡಿಸಿದ್ದಾರೆ.

Advertisement

ಭಾನುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಮತ್ತು ವಾಣಿಜ್ಯ ಮಳಿಗೆಗಳನ್ನು ತೆರೆದು ವ್ಯಾಪಾರ- ವಹಿವಾಟು ನಡೆಸಲು ಅನು ಮತಿ ನೀಡಲಾಗಿದೆ. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.

ಚಿತ್ರಮಂದಿರಗಳು, ಸಿನಿಮಾ ಹಾಲ್‌, ಪಬ್‌ಗಳನ್ನು ನಿರ್ಬಂಧಿ ಸಲಾಗಿದೆ. ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಇತರೆ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ನಿರ್ಬಂಧಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು, ಟ್ಯುಟೋರಿಯಲ್‌ ಗಳು, ಕಾಲೇಜುಗಳನ್ನು ಮುಂದಿನ ಆದೇಶದವರೆಗೂ ತೆರೆಯುವುದನ್ನು ನಿರ್ಬಂಧಿಸಲಾಗಿದೆ ಎಂದಿದ್ದಾರೆ. ಈಜುಕೊಳಗಳಲ್ಲಿ ಸ್ಪರ್ಧಾತ್ಮಕ ಉದ್ದೇಶಕ್ಕಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು ತೆರೆಯಲು ಅವಕಾಶ ನೀಡಲಾಗಿದೆ.

ಡಾ ಸಂಕೀರ್ಣ ಮತ್ತು ಕ್ರೀಡಾಂಗಣಗಳನ್ನು ಕ್ರೀಡಾಪಟುಗಳ ಕ್ರೀಡಾಭ್ಯಾಸಕ್ಕೆ ಅನುಮತಿಸಲಾಗಿದೆ. ಪ್ರೇಕ್ಷಕರಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸಿ 100 ಜನರು ಭಾಗವಹಿಸಲು ಅನುಮತಿ ನೀಡಲಾಗಿದೆ. ಶವಸಂಸ್ಕಾರ ಕಾರ್ಯದಲ್ಲಿ 20 ಜನರು ಭಾಗವಹಿಸಲು ಅವಕಾಶ ನೀಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶ, ದೇವರ ದರ್ಶನ, ಪೂಜೆ, ಪ್ರಾರ್ಥನೆ ಮತ್ತು ಆರತಿ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ದೊಡ್ಡ ದೇವಸ್ಥಾನಗಳಲ್ಲಿ 100 ಮಂದಿ ಹಾಗೂ ಸಣ್ಣ ದೇವಸ್ಥಾನ ಪ್ರಾರ್ಥನಾ ಮಂದಿರಗಳಲ್ಲಿ 20 ಜನರು ಭಾಗವಹಿಸಲು ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದ್ದಾರೆ. ಆಸನ ಸಾಮರ್ಥ್ಯದವರೆಗೆ ಸಾರ್ವಜನಿಕ ಸಾರಿಗೆ ಸಂಚರಿಸಲು ಅನುಮತಿಸಲಾಗಿದೆ. ಕೋವಿಡ್‌ ನಿಯಮಗಳನ್ನು ಉಲ್ಲಂಘನೆ ಮಾಡುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Advertisement

ಜಿಲ್ಲಾದ್ಯಂತ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು ಸಾರ್ವಜನಿಕರ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿ ಸಲಾಗಿದೆ. ರೋಗಿಗಳು ಮತ್ತು ಅವರ ಪರಿಚಾರಕರು ತುರ್ತು ಸಂದರ್ಭಗಳಲ್ಲಿ ಓಡಾಡಲು ಅವಕಾಶ ನೀಡಲಾಗಿದೆ. ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಕೈಗಾರಿಕೆಗಳು, ಕಂಪೆನಿಗಳು, ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಸಂಚರಿಸುವ ವೇಳೆ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ ಎಂದಿದ್ದಾರೆ.

ದೂರವಾಣಿ ಮತ್ತು ಅಂತರ್ಜಾಲ ಸೇವಾಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು ಸಂಸ್ಥೆಯಿಂದ ಪಡೆದಿರುವ ಗುರುತಿನ ಚೀಟಿ ತೋರಿಸಿ ಸಂಚರಿಸಬಹುದಾಗಿದೆ. ಈ ಸಂಸ್ಥೆಗಳು ಅಗತ್ಯ ಸಿಬ್ಬಂದಿಗಳನ್ನು ಮಾತ್ರ ಬಳಸಿಕೊಳ್ಳಬೇಕು. ಉಳಿದ ಸಿಬ್ಬಂದಿಗಳು ಮನೆಯಿಂದ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಮೆಡಿಕಲ್‌, ಫಾರ್ಮಸಿ ತುರ್ತು ಅಗತ್ಯ ಸೇವೆಗಳಿಗೆ ಸಂಪೂರ್ಣ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಎಲ್ಲಾ ರೀತಿಯ ಸರುಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಕ್ಕೆ ಹೋಗುವ ಖಾಸಗಿ ವಾಹನ ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಟಿಕೆಟ್‌ಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿರುವ ಅವರು, ಈ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next