Advertisement

ಮೌಲ್ಯಾಧಾರಿತ ರಾಜಕಾರಣ ಅಗತ್ಯ: ಬೆಳ್ಳಿ ಪ್ರಕಾಶ್‌

09:29 PM Jul 04, 2021 | Team Udayavani |

ಕಡೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ರಾಜಕಾರಣ ಮಾಡಬೇಕೇ ಹೊರತು ಸುಳ್ಳು, ದ್ವೇಷ ಕುತಂತ್ರದ ರಾಜಕಾರಣ ಮಾಡಬಾರದು ಎಂದು ಶಾಸಕ ಬೆಳ್ಳಿಪ್ರಕಾಶ್‌ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಎಪಿಎಂಸಿ ಅಧ್ಯಕ್ಷರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸುಳ್ಳು ಸಾಕು ಬೆಳ್ಳಿ ಬೇಕು’ ಎಂಬ ಘೋಷವಾಕ್ಯದೊಂದಿಗೆ 2018 ರಲ್ಲಿ ತಮ್ಮನ್ನು ಜನರು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಶುಕ್ರವಾರ ಜಿಲ್ಲಾ ಧಿಕಾರಿ ಕಚೇರಿ ಮುಂದೆ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಅವರು ಬಗರ್‌ ಹುಕುಂ ಸಾಗುವಳಿ ಸಮಸ್ಯೆ, ರಾಗಿ ಖರೀದಿ ಹಣ ಬಿಡುಗಡೆಯಾಗದಿರುವ ಬಗ್ಗೆ ಮತ್ತು ಕಡೂರು ಬಂಡಿಮೋಟ್‌ ಜಾಗ ಕಾನೂನುಬಾಹಿರ ಖಾತೆ ಹೊಂದಿದೆ ಎಂದು ಆರೋಪಿಸಿ ಮೌನ ಪ್ರತಿಭಟನೆ ಮಾಡಿರುವುದನ್ನು ಶಾಸಕರು ಉಲ್ಲೇಖೀಸಿ ಇದು ಕೇವಲ ಪ್ರಚಾರಕ್ಕಾಗಿ ಮಾಡಿದ ಪ್ರತಿಭಟನೆ ಎಂದು ಲೇವಡಿ ಮಾಡಿದರು.

ತಮ್ಮ ಶಾಸಕತ್ವದ ಅವ ಧಿಯಲ್ಲಿ ಬಗರ್‌ಹುಕುಂ ಸಾಗುವಳಿ ಪತ್ರವನ್ನು ಯಾರಿಗೂ ವಿತರಿಸಿಲ್ಲ. ಆದರೂ ಮಾಜಿ ಶಾಸಕರು ವ್ಯರ್ಥ ಆರೋಪ ಮಾಡಿದ್ದಾರೆ. ಬಗರ್‌ಹುಕುಂ ಸಾಗುವಳಿ ಪತ್ರ ವಿತರಣೆ ಕುರಿತಂತೆ ಸಮಗ್ರ ತನಿಖೆಗೆ ತಮ್ಮ ಒತ್ತಾಯವೂ ಇದ್ದು ಈ ಬಗ್ಗೆ ಸೋಮವಾರ ಜಿಲ್ಲಾ  ಧಿಕಾರಿಗಳಿಗೆ ತಾವು ಲಿಖೀತವಾಗಿ ನೀಡಲಿದ್ದು ಆಗ ಯಾರ ಕಾಲದಲ್ಲಿ ತಪ್ಪಾಗಿದೆ ಯಾರಿಂದ ತಪ್ಪಾಗಿದೆ ಎಂಬ ಸತ್ಯಾಂಶ ಹೊರ ಬೀಳಲಿದೆ.

ಜನರಿಗೂ ಅರ್ಥವಾಗಲಿದೆ ಎಂದು ಹೇಳಿದರು. ಬಗರ್‌ಹುಕುಂನ ಕೆಲವು ಪ್ರಕರಣಗಳು ತನಿಖೆಯ ಹಂತದಲ್ಲಿರುವುದರಿಂದ ತಾವು ಸಮಿತಿಯ ಅಧ್ಯಕ್ಷರಾದರೂ ಇದುವರೆಗೂ ಒಂದು ಸಭೆಯನ್ನು ಕರೆದಿಲ್ಲ. ಸಾಗುವಳಿ ಖಾಲಿ ಪತ್ರಕ್ಕೆ ಸಹಿ ಮಾಡಿರುವುದು ಯಾರು ಎಂದು ಮಾಜಿ ಶಾಸಕರೇ ಉತ್ತರಿಸಲಿ ಎಂದು ಕುಟುಕಿದರು. ಮನೆಯ ಬಾಗಿಲನ್ನು ಬಡಿದು ಸಾಗುವಳಿ ಪತ್ರ ನೀಡಿದವರು ಯಾರು? ಆ ಪತ್ರಗಳೆಲ್ಲ ರದ್ದಾಗಿರುವುದು ಯಾಕೆ? ಸಮಗ್ರ ತನಿಖೆ ನಡೆದರೆ ಯಾರ ಬಣ್ಣ ಬಯಲಾಗುತ್ತದೆ ಎಂಬ ಕನಿಷ್ಟ ಅರಿವು ಇಲ್ಲ. ಅಮಾಯಕರಿಗೆ, ಬಡವರಿಗೆ ತೊಂದರೆಯಾಗುತ್ತದೆ ಎಂಬ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ ಎಂದು ಹೇಳಿದರು.

Advertisement

ಪಟ್ಟಣದ ಸುಭಾಷ್‌ ವೃತ್ತದ ಬಳಿ ಇರುವ ಬಂಡಿಮೋಟ್‌ ಜಾಗ ಕುರಿತಂತೆ ಕಾನೂನು ಬಾಹಿರ ಖಾತೆ ಕುರಿತಂತೆ ಪ್ರಸ್ತಾಪಿಸಿದ ಮಾಜಿ ಶಾಸಕರು ಪುರಸಭೆಯಲ್ಲಿ ಅವರದ್ದೇ ಪಕ್ಷದ ಅಧ್ಯಕ್ಷರಿದ್ದಾರೆ. ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಬೆಂಬಲದೊಂದಿಗೆ ಹಿಡಿದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿ. ಕಾನೂನು ಬಾಹಿರವಾಗಿದ್ದರೆ ಖಾತೆ ರದ್ದು ಮಾಡಲಿ. ಇದರಲ್ಲಿ ಹಸ್ತಕ್ಷೇಪ ಏನೂ ಇಲ್ಲ. ತನಿಖೆಗೆ ಪೂರ್ಣ ಸಹಕಾರ ಇದೆ. ಈಗಾಗಲೇ ಉಪ ವಿಭಾಗಾ ಧಿಕಾರಿಗಳು ಸಮಗ್ರ ತನಿಖೆ ನಡೆಸಿ ಜಿಲ್ಲಾ ಧಿಕಾರಿಗಳಿಗೆ ವರದಿ ನೀಡಿದ್ದಾರೆ ಎಂದರು.

ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಬಂಡಿಮೋಟ್‌ ಮೈದಾನ ಕುರಿತಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಪಟ್ಟಣದ ವಿವಿಧೆಡೆ ಇರುವ ಅಕ್ರಮ ಜಾಗಗಳ ಕುರಿತು ಅವರು ತನಿಖೆಗೆ ಒತ್ತಾಯಿಸಲಿ. ಅದರ ಬಗ್ಗೆಯೂ ಲೋಕಾಯುಕ್ತಕ್ಕೆ ದೂರು ನೀಡಲಿ. ಇದು ಪ್ರಜಾಪ್ರಭುತ್ವದ ನೈಜ ರಾಜಕಾರಣ ಎಂದರು.

ರಾಜ್ಯದ 9 ಜಿಲ್ಲೆಗಳಲ್ಲಿ ಸರಕಾರ ರಾಗಿ ಖರಿದಿ ಕೇಂದ್ರಗಳನ್ನು ಸ್ಥಾಪಿಸಿ ಒಟ್ಟಾರೆ 89,695 ರೈತರಿಂದ 21,49,556 ಕ್ವಿಂಟಾಲ್‌ ರಾಗಿಯನ್ನು ಖರೀದಿ ಮಾಡಿದ್ದು ಇದರಲ್ಲಿ 327 ಕೋಟಿ ಹಣವನ್ನು ರೈತರ ಖಾತೆಗೆ ಈಗಾಗಲೇ ಸಂದಾಯ ಮಾಡಲಾಗಿದೆ. 390.16 ಕೋಟಿ ಹಣವನ್ನು ನೀಡಬೇಕಾಗಿದೆ. ಕೋವಿಡ್‌ ಮತ್ತಿತರ ಕಾರಣಗಳಿಂದ ವಿಳಂಬವಾಗಿರುವುದು ಬಿಟ್ಟರೆ ಮಾಜಿ ಶಾಸಕರ ಆರೋಪದಂತೆ ಸರಕಾರದ ಮುಂದೆ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಪಿಎಂಸಿ ಅಧ್ಯಕ್ಷ ಚೌಳಹಿರಿಯೂರು ರವಿಕುಮಾರ್‌, ಕೆ.ಆರ್‌. ಮಹೇಶ್‌ ಒಡೆಯರ್‌, ದಾನಿ ಉಮೇಶ್‌, ಜಿಗಣೆಹಳ್ಳಿ ನೀಲಕಂಠಪ್ಪ, ವಕ್ತಾರ ಶಾಮಿಯಾನ ಚಂದ್ರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next