ಚಿಕ್ಕಮಗಳೂರು: ಪರಿಶಿಷ್ಟ ಜಾತಿಯವರ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಭೂ ಮಾಲೀಕರು ಗೇಟ್ ನಿರ್ಮಿಸಿ ಬೇಲಿ ಹಾಕುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ. ತಾಲೂಕು ಆಡಳಿತಕ್ಕೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ತಾಲೂಕು ಬೆಟ್ಟದಮರಳಿ ಗ್ರಾಮದ ದಲಿತ ಕಾಲೋನಿ ನಿವಾಸಿಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ವಿಶ್ವರತ್ನ, ಸಂವಿಧಾನ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ಇತರೆ ಮುಖಂಡರು ಪ್ರತಿಭಟನೆ ನಡೆಸಿ ಭೂ ಮಾಲೀಕರು, ತಾಲೂಕು ಆಡಳಿತ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಭೂ ಮಾಲೀಕರು ಮತ್ತು ಮೇಲ್ವರ್ಗದವರಿಂದ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದರೂ ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಚಿಕ್ಕಮಗಳೂರು ತಾಲೂಕಿನ ಆವುತಿ ಹೋಬಳಿ, ಬಸರವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಬೆಟ್ಟದಮಳಲಿ ಗ್ರಾಮದಲ್ಲಿರುವ ಕುಳುವಾಡಿ ಗದ್ದೆ ಎಂಬ ದಲಿತರ ಕಾಲೋನಿಯಲ್ಲಿ ಸುಮಾರು 15 ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ವಾಸವಿದ್ದು, ಈ ಕಾಲೋನಿ ಸಂಪರ್ಕಕ್ಕೆ ಅನಾದಿ ಕಾಲದಿಂದಲೂ ಸಂಪರ್ಕ ರಸ್ತೆಯೂ ಇದೆ.
ಆದರೆ ಇದೇ ಗ್ರಾಮದ ಭೂ ಮಾಲೀಕರೊಬ್ಬರು ದಲಿತ ಕಾಲೋನಿಗೆ ಸಂಪರ್ಕ ರಸ್ತೆಗೆ ಗೇಟ್ ಅಳವಡಿಸಿ ರಸ್ತೆಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ದಲಿತರ ಕಾಲೋನಿ ಸಂಪರ್ಕ ರಸ್ತೆ ಗ್ರಾಮದ ನಕಾಶೆಯಲ್ಲಿದ್ದು, ಈ ರಸ್ತೆಗೆ ಹಾಕಿರುವ ಬೇಲಿ ತೆರವು ಮಾಡಬೇಕೆಂದು ಬಸರವಳ್ಳಿ ಗ್ರಾಪಂನಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಆದರೆ ಭೂ ಮಾಲೀಕರು ಪ್ರಭಾವಿಗಳಾಗಿದ್ದು, ತಮ್ಮ ಪ್ರಭಾವ ಬಳಿಸಿ ರಸ್ತೆಗೆ ಹಾಕಿರುವ ಗೇಟ್, ಬೇಲಿಯನ್ನು ತೆರವು ಮಾಡದೇ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದರು.
ದೌರ್ಜನ್ಯದ ವಿರುದ್ಧ ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ನಿವಾಸಿಗಳು ಅನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ಪ್ರಭಾವಿಗಳ ಒತ್ತಡಕ್ಕೆ ಮಣಿದು ರಸ್ತೆ ತೆರವುಗೊಳಿಸಿ ದಲಿತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಸಂಬಂ ಧಿಸಿದ ಇಲಾಖಾ ಧಿಕಾರಿಗಳು ಕೂಡಲೇ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ದಲಿತರ ಕಾಲೋನಿ ಸಂಪರ್ಕಕ್ಕೆ ಇರುವ ಏಕೈಕ ರಸ್ತೆಯನ್ನು ಭೂ ಮಾಲೀಕರಿಂದ ಬಿಡಿಸಿಕೊಡಬೇಕು.
ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಕಾಲೋನಿ ನಿವಾಸಿಗಳು ಅನಿ ರ್ದಿಷ್ಟಾವ ಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಶ್ವರತ್ನ ಯುವ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಸಂವಿಧಾನ ರಕ್ಷಣಾ ವೇದಿಕೆ ಸಂಚಾಲಕ ಗೌಸ್ ಮೊಹಿದ್ದೀನ್, ದಲಿತ ಸಂಘರ್ಷ ಸಮತಿ ಮುಖಂಡ ಟಿ.ಎಲ್. ಗಣೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ತೀರ್ಥಕುಮಾರ್, ರಘು, ಸುನಿಲ್ ಇತರರು ಇದ್ದರು.