ಚಿಕ್ಕಮಗಳೂರು: ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಜಿಲ್ಲೆಯನ್ನು ಅನ್‌ಲಾಕ್ ಮಾಡಲಾಗಿದ್ದು, ನಗರಾದ್ಯಂತ ಜನದಟ್ಟಣೆ, ವಾಹನದಟ್ಟಣೆ ಉಂಟಾಗಿತ್ತು. ಜು.5ರ ವರೆಗೂ ಬೆಳಗ್ಗೆ 6ಗಂಟೆಯಿಂದ ಸಂಜೆ 5ಗಂಟೆಯವರೆಗೂ ಅಂಗಡಿ- ಮುಂಗಟ್ಟು ಗಳನ್ನು ತೆರೆದು ವ್ಯಾಪಾರ- ವಹಿವಾಟು ನಡೆಸಲು ಅನುಮತಿಸಲಾಗಿದ್ದು ಬಹುತೇಕ ಎಲ್ಲಾ ಅಂಗಡಿ- ಮುಂಗಟ್ಟುಗಳ ಮಾಲೀಕರು ಬಾಗಿಲು ತೆರದು ವ್ಯಾಪಾರ- ವಹಿವಾಟು ನಡೆಸಿದರು.
ಅಂಗಡಿ- ಮುಂಗಟ್ಟುಗಳ ಬಾಗಿಲು ತೆರೆಯುತ್ತಿದ್ದಂತೆ ಜನರು ಸಾಮಾಜಿಕ ಅಂತರ ಮರೆತು ವಸ್ತುಗಳ ಖರೀದಿಗೆ ಮುಂದಾದರು. ಕಳೆದ ಅನೇಕ ದಿನಗಳಿಂದ ಬಣಗುಡುತ್ತಿದ್ದ ಎಂ.ಜಿ.ರಸ್ತೆ, ಐಜಿ.ರಸ್ತೆ, ಮಾರ್ಕೆಟ್ ರಸ್ತೆಗಳು ಜನರಿಂದ ಗಿಜಿಗುಡುತ್ತಿದ್ದವು. ಸೋಮವಾರ ಬೆಳಗ್ಗೆಯಿಂದಲೇ ನಗರದಲ್ಲಿ ವಾಹನ ದಟ್ಟಣೆ ಉಂಟಾಗಿದ್ದು ಕೆಲವು ಕಡೆಗಳಲ್ಲಿ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ನಗರದ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನಗಳನ್ನು ಸಾಲುಗಟ್ಟಿ ನಿಲ್ಲಿಸಲಾಗಿತ್ತು. ಸರ್ಕಾರಿ ಕಚೇರಿ ಸೇರಿದಂತೆ ಎಲ್ಲೆಲ್ಲೂ ಜನಜಂಗುಳಿಯಿಂದ ಕೂಡಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಒಮ್ಮೆಗೇ ನಗರದತ್ತ ಮುಖ ಮಾಡಿದ್ದರಿಂದ ಜನದಟ್ಟಣೆ ಏರ್ಪಟ್ಟಿದ್ದು, ಅಂಗಡಿ- ಮುಂಗಟ್ಟುಗಳಲ್ಲಿ ವ್ಯಾಪಾರ- ವಹಿವಾಟು ಗರಿಗೆದರಿತ್ತು.
ಅನೇಕ ತಿಂಗಳಿಂದ ಅಂಗಡಿ ಬಾಗಿಲು ಹಾಕಿದ್ದರಿಂದ ಅಂಗಡಿಗಳನ್ನು ಸ್ವತ್ಛಗೊಳಿಸುವ ಕಾರ್ಯದಲ್ಲಿ ಅಂಗಡಿಗಳ ಸಿಬ್ಬಂದಿ ತಲ್ಲೀನರಾಗಿದ್ದರು. ನಗರದ ಉದ್ಯಾನವನಗಳಲ್ಲಿ ಜನಪ್ರವೇಶಕ್ಕೆ ಅವಕಾಶ ನೀಡಿದ್ದು ಉದ್ಯಾನವನಗಳಿಗೆ ತೆರಳಿ ದ ಜನರು ವ್ಯಾಯಾಮ ಬೆಳಗಿನ ವಾಯುವಿಹಾರವನ್ನು ನಡೆಸಿದರು.
ಹೊಟೇಲ್, ಮಾರ್ಕೆಟ್‌ಗಳು ದಿನನಿತ್ಯದ ಚಟುವಟಿಕೆಗಳನ್ನು ಆರಂಭಿಸಿದವು. ಹವಾ ನಿಯಂತ್ರಿತವಲ್ಲದ ವ್ಯಾಯಾಮ ಶಾಲೆಗಳು ಬಾಗಿಲು ತೆರೆದು ಕಾರ್ಯಾರಂಭಗೊಂಡವು. ಜಿಲ್ಲಾಡಳಿತ ಅನುಮತಿಸಿದ್ದ ಎಲ್ಲಾ ಅಂಗಡಿ- ಮುಂಗಟ್ಟುಗಳು ಬಾಗಿಲು ತೆರೆದು ಕಾರ್ಯಾರಂಭ ಮಾಡಿದವು