ಚಿಕ್ಕಮಗಳೂರು: ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಗೆ ಕನಿಷ್ಟ 3 ವರ್ಷ ಅವಕಾಶ ನೀಡಬೇಕೆಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಿದರು. ಈ ಹಿಂದೆ 3 ವರ್ಷಗಳ ಪದವಿ ಶಿಕ್ಷಣದಲ್ಲಿ ಭಾಷಾ ಕಲಿಕೆಗೆ 2 ವರ್ಷ ಅವಕಾಶವಿತ್ತು. ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯ, ಆಲೋಚನಾ ಶಕ್ತಿ, ತಾರ್ಕಿಕ ಶಕ್ತಿ, ಮಾತೃಭಾಷೆಯ ಬಗ್ಗೆ ಆಳವಾದ ಜ್ಞಾನ ಬೆಳೆಯುತ್ತಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದೀಗ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ಶಿಕ್ಷಣಕ್ಕೆ 4 ವರ್ಷ ನಿಗ ದಿಪಡಿಸಲಾಗಿದ್ದು, ಅದರಲ್ಲಿ ಭಾಷಾ ಶಿಕ್ಷಣಕ್ಕೆ ಕೇವಲ ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಬಗ್ಗೆ ಆಳವಾದ ಜ್ಞಾನ, ಅಭಿಮಾನ, ಸಾಹಿತ್ಯದ ಅಧ್ಯಯನ, ಕನ್ನಡದ ಸಂಸ್ಕೃತಿ ಮತ್ತು ಪರಂಪರೆ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಗೂಗಲ್ ಸೇರಿದಂತೆ ಅನೇಕ ಕಡೆ ಕನ್ನಡ ಭಾಷೆಗೆ ಇತ್ತೀಚಿನ ವರ್ಷಗಳಲ್ಲಿ ಅಪಮಾನ ಮತ್ತು ಕುತ್ತು ಬರುತ್ತಿದೆ. ಈಗ ಸರ್ಕಾರದಿಂದಲೇ ಕುತ್ತು ಬರುತ್ತಿರುವುದು ದುರಂತ. 4 ವರ್ಷಗಳ ನೂತನ ಪದವಿ ಶಿಕ್ಷಣದಲ್ಲಿ ಇನ್ನಷ್ಟು ಅವಧಿಯ ಭಾಷಾ ಭೋಧನೆಯನ್ನು ಹೆಚ್ಚಿಸುವ ಬದಲು ಒಂದು ವರ್ಷಕ್ಕೆ ಇಳಿಸಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಗೆ ಕನಿಷ್ಟ 3 ವರ್ಷಗಳ ಅವ ಧಿ ನಿಗ ದಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಸಂಗಮ ಪ್ರತಿಷ್ಠಾನದ ಸಂಚಾಲಕ ಎಂ.ಸಿ. ಶಿವಾನಂದಸ್ವಾಮಿ, ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ರವೀಶ್ ಬಸಪ್ಪ, ನವ ಕರ್ನಾಟಕ ಯುವಶಕ್ತಿ ವೇದಿಕೆಯ ಅಧ್ಯಕ್ಷ ಸಿ.ಆರ್. ರಘು, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ, ಶಂಕರೇಗೌಡ, ಜಿಲ್ಲಾ ಡಾ| ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಂ. ಕುಮಾರ್, ಓಂಕಾರೇಗೌಡ, ಎಲ್.ವಿ. ಕೃಷ್ಣಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.