ಚಿಕ್ಕಮಗಳೂರು: ಕೋವಿಡ್ ಪಾಸಿಟಿವಿಟಿ ರೇಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆ ಇತ್ತೀಚೆಗೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದುಕೊಂಡು ಇಡೀ ರಾಜ್ಯದ ಗಮನ ಸೆಳೆದಿತ್ತು. ಕಾಫಿನಾಡಿನಲ್ಲಿ ಸೋಂಕಿನ ಪಾಸಿಟಿವಿಟಿ ರೇಟ್ ಸದ್ಯ ಶೇ.7ಕ್ಕೆ ಇಳಿಕೆ ಕಂಡಿದ್ದು ಜಿಲ್ಲೆಯ ಜನತೆಯಲ್ಲಿ ನೆಮ್ಮದಿ ಮೂಡಿಸಿದೆ. ಸೋಂಕಿನ ಪ್ರಮಾಣ ಇದೇ ರೀತಿ ಕಡಿಮೆಯಾದರೆ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಒಂದು ವಾರದಲ್ಲಿ ಶೇ.5ಕ್ಕೆ ಇಳಿಕೆಯಾಗುವ ಆಶಾಭಾವನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿ ಕಾರಿಗಳು ಮತ್ತು ವೈದ್ಯರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳಗೊಳ್ಳುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ|ಕೆ.ಸುಧಾಕರ್ ಜಿಲ್ಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.
ಜಿಪಂ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಮಟ್ಟದ ಅಧಿ ಕಾರಿಗಳ ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದು ಪಾಸಿಟಿವಿಟಿ ರೇಟ್ ಶೇ.7ಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಜೂ.1ರಂದು ಜಿಲ್ಲೆಯಲ್ಲಿ 504 ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಜೂ.2ರಂದು214, ಜೂ.3ರಂದು742, ಜೂ.4ರಂದು 595, ಜೂ.5ರಂದು378, ಜೂ.6ರಂದು 416, ಜೂ.7ರಂದು 365, ಜೂ.8ರಂದು 287, ಜೂ.9ರಂದು 339, ಜೂ.10ರಂದು 397, ಜೂ.11ರಂದು 332, ಜೂ.12ರಂದು 342, ಜೂ.13ರಂದು 223, ಜೂ.14ರಂದು 185, ಜೂ.15ರಂದು 224 ಹಾಗೂ ಜೂ.16ರಂದು 254 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಈ ಪಾಸಿಟಿವ್ ಸಂಖ್ಯೆಗಳನ್ನು ಗಮನಿಸಿದಾಗ ಸೋಂಕು ನಿಧಾನವಾಗಿ ಕ್ಷೀಣಿಸುತ್ತಿದೆ ಎಂಬುದು ಖಾತ್ರಿಯಾಗುತ್ತಿದೆ. ಕೋವಿಡ್ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಹೆಚ್ಚಿಸಲಾಗಿದ್ದು ಪ್ರತೀ ದಿನ ನಾಲ್ಕು ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಮತ್ತು ಸೋಂಕಿತರ ಸಂಪರ್ಕಕ್ಕೆ ಬರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪರೀಕ್ಷೆಗೆ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳಿಗೆ ಚಾಲನೆ ನೀಡಲಾಗಿದೆ. ಈ ವಾರದಲ್ಲೇ ಕೋವಿಡ್ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕೆ ಇಳಿಕೆಯಾಗಲಿದೆ ಎಂಬ ಆಶಾಭಾವನೆಯನ್ನು ಹೊಂದಿದ್ದು ಜಿಲ್ಲೆಯ ಜನತೆ ನಿಟ್ಟುಸಿರುವ ಬಿಡುವಂತೆ ಮಾಡಿದೆ. ಸೋಂಕು ಪ್ರಮಾಣ ಇಳಕೆಯಾಗುತ್ತಿದೆ ಎಂದು ಜನರು ಮೈಮರೆಯಬಾರದು. ಜಾಗ್ರತೆ ವಹಿಸಬೇಕಿದೆ.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಶೇ.7ಕ್ಕೆ ಇಳಿಕೆಯಾಗಿದೆ. ಈ ವಾರದಲ್ಲೇ ಶೇ.5ಕ್ಕೆ ಇಳಿಕೆಯಾಗಲಿದೆ. ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಬುಧವಾರ 1,400 ಜನರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದ್ದು, 160 ಪಾಸಿಟಿವ್ ಬಂದಿದೆ. ಸರ್ಕಾರ ನಿಗದಿಪಡಿಸಿದ ಆದ್ಯತೆ ಮೇರೆಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಮೂರನೇ ಅಲೆಯ ನಿಯಂತ್ರಣಕ್ಕೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತಜ್ಞ ವೈದ್ಯರ ಸಭೆಗಳನ್ನು
ಮಾಡಲಾಗಿದೆ. ಜಿಲ್ಲೆಯಲ್ಲಿ 11ಬ್ಲಾಕ್ ಫಂಗಸ್ ಪ್ರಕರಣ ಕಂಡುಬಂದಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವಿಟಿ ಕಡಿಮೆಯಾಗುತ್ತಿದ್ದು. ಈ ವಾರಾಂತ್ಯದಲ್ಲಿ ಕಡಿಮೆಯಾಗಲಿದೆ.
ಡಾ| ಉಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ