Advertisement
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದಲ್ಲಿ ಅ ಧಿಕಾರದ ಚರ್ಚೆ ಬಹಳಷ್ಟು ನಡೆಯುತ್ತಿದ್ದು, ಕೋವಿಡ್ ನಿರ್ವಹಣೆ ಮುಗಿದು ಹೋಗಿದೆ ಎಂದು ಭಾವಿಸಿದಂತೆ ಕಾಣುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು ಅದು ಘೋಷಣೆಯಾಗಿ ಉಳಿದಿದೆ. ಇದುವರೆಗೂ ಯಾರಿಗೂ ತಲುಪಿಲ್ಲ ಎಂದರು.
Related Articles
Advertisement
ಜು.1ರಿಂದ ಶಾಲೆಗಳನ್ನು ಆರಂಭಿಸುವುದಾಗಿ ಮತ್ತು ಜೂ.14ರಿಂದ ದಾಖಲಾತಿ ಆರಂಭಿಸುವುದಾಗಿ ಸರ್ಕಾರ ಹೇಳಿದೆ. ಜು.10ರಿಂದ 10ನೇ ತರಗತಿ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ. ಕೋವಿಡ್ ಲಸಿಕೆಯನ್ನು ಎಲ್ಲಾ ಶಿಕ್ಷಕರಿಗೂ ಇದುವರೆಗೂ ನೀಡಿಲ್ಲ, ಈ ಬಗ್ಗೆ ಜಿಲ್ಲಾಡಳಿತವನ್ನು ಪ್ರಶ್ನಿಸಿದರೆ, ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲವೆಂದು ಹೇಳುತ್ತಾರೆ.
ಯಾವ ಧೈರ್ಯದ ಮೇಲೆ ಶಿಕ್ಷಕರು ಶಾಲೆಗಳಿಗೆ ತೆರಳಬೇಕು ಮತ್ತು ಯಾವ ಧೈರ್ಯದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಎಂದು ಪ್ರಶ್ನಿಸಿದರು. ಶಾಲಾ- ಕಾಲೇಜು ಆರಂಭಿಸುವುದಾದರೆ ಪ್ರತೀ ಶಿಕ್ಷಕನಿಂದ ಹಿಡಿದು ಕಾಲೇಜು ಉಪನ್ಯಾಸಕರವರೆಗೂ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಬೇಕು. ಗರ್ಭಿಣಿ ಶಿಕ್ಷಕಿಯರಿಗೆ ವಿನಾಯಿತಿ ನೀಡಬೇಕು. ಮೂರನೇ ಅಲೆ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದು 3ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ತಕ್ಷಣ ಸಜ್ಜಾಗಬೇಕು. ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಚಿಕಿತ್ಸೆ ನೀಡುವಷ್ಟು ಔಷಧ ದಾಸ್ತಾನು ಜಿಲ್ಲೆಯಲ್ಲಿಲ್ಲ, ಚಿಕಿತ್ಸೆಗೆ ಅಕ್ಕಪಕ್ಕದ ಜಿಲ್ಲೆಗಳಿಗೆ ಕಳಿಸಲಾಗುತ್ತಿದೆ. ಜಿಲ್ಲಾಡಳಿತ, ಅ ಧಿಕಾರಿಗಳು ಸಾಲು- ಸಾಲು ಸಭೆಗಳನ್ನು ಮಾಡುತ್ತಿದ್ದಾರೆ. ಸಭೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತದ ವಿಫಲತೆ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.
ಸಕಾಲಕ್ಕೆ ಚಿಕಿತ್ಸೆ ಸಿಗದೆ ಅವರಲ್ಲಿರುವ ಶಕ್ತಿ ಸಾಮರ್ಥ್ಯದಿಂದ ಸೋಂಕಿನಿಂದ ಬಚಾವಾಗಿದ್ದಾರೆ. ಎಲ್ಲವನ್ನು ಕಳೆದುಕೊಂಡಿದ್ದಾರೆ. ಅವರು ಸ್ವ-ಸಾಮರ್ಥ್ಯದಿಂದ ಬಚಾವಾಗಿದ್ದು ಕೋವಿಡ್ ನಿಯಂತ್ರಿಸಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವು ತಟ್ಟಿಕೊಳ್ಳಬೇಡಿ ಎಂದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಯನ್ನು ಸರ್ಕಾರ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದರು.
ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂ. ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ. ಆ ಹಣವನ್ನು ಏನು ಮಾಡಿದಿರಿ ಎಂದು ಪ್ರಶ್ನಿಸಿದ ಅವರು, ಖಾಸಗಿ ಶಾಲಾ ಶಿಕ್ಷಕರು ತುಂಬ ಸಂಕಷ್ಟದಲ್ಲಿದ್ದು ಅವರಿಗೆ ನೆರವು ನೀಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಸಂಗ್ರಹಿಸಿ ಈ ವರ್ಷದ ವಿದ್ಯಾರ್ಥಿಗಳಿಗೆ ನೀಡುವಂತೆ ಸರ್ಕಾರಿ ಆದೇಶವನ್ನೇ ಹೊರಡಿಸಿದೆ. ಈ ಕೋವಿಡ್ ಕಷ್ಟಕಾಲದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆ- ಮನೆಗೆ ತೆರಳಿ ಪಠ್ಯಪುಸ್ತಕ ಸಂಗ್ರಹಿಸಲು ಸಾಧ್ಯವೇ ಎಂದರು.