ಚಿಕ್ಕಮಗಳೂರು: ಕೋವಿಡ್ ಸೋಂಕು ದಿನೇದಿನೇ ಹೆಚ್ಚುತ್ತಿದ್ದು, ಜನರ ಜೀವ ಹಿಂಡುತ್ತಿದೆ. ಆದರೂ ಕೆಲ ನಿಯಮ ಪಾಲನೆಯಲ್ಲಿ ಆಸ್ಪತ್ರೆಗಳ ನಿಯಮ ಉಲ್ಲಂಘಿಸುತ್ತಿರುವುದು ನಡೆದೇ ಇದೆ. ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಆಸ್ಪತ್ರೆಯಲ್ಲಿ ಇಂತಹದ್ದೊಂದು ಪ್ರಕರಣ ನಡೆದಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಂಕಿತರ ಸಂಬಂಧಿಗಳ ವರ್ತನೆ ಹಾಗೂ ಆಸ್ಪತ್ರೆಯ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಈ ಕೋವಿಡ್ ವಾರ್ಡ್‌ವೊಂದರಲ್ಲಿ ಸೋಮವಾರ ಬೆಳಗ್ಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ವ್ಯಕ್ತಿಯ ಮೃತದೇಹ ಪಕ್ಕದಲ್ಲೇ ಇದ್ದರೂ ಸೋಂಕಿತರು ಮತ್ತು ಅವರ ಸಂಬಂಧಿ ಕರು ಅಲ್ಲೇ ಕುಳಿತು ಊಟ ಮಾಡಿದ್ದಾರೆ. ಅಲ್ಲದೆ ಸೋಂಕಿನ ಭಯವಿಲ್ಲದೇ ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್‌ನಲ್ಲಿ ಸೋಂಕಿತರ ಸಂಬಂಧಿಕರು ಪಿಪಿಇ ಕಿಟ್‌ಧರಿಸದೇ ರಾಜಾರೋಷವಾಗಿ ತಿರುಗಾಡುತ್ತಿರುವ ದೃಶ್ಯ ಸೆರೆಯಾಗಿದೆ.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರು ಇದನ್ನೆಲ್ಲ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆ ವಿಡಿಯೋ ವೈರಲ್ ಆಗಿದೆ. ಸೋಂಕಿತರಿಗೆ ಊಟ, ಉಪಾಹಾರ ನೀಡುವ ನೆಪದಲ್ಲಿ ವಾರ್ಡ್‌ಗೆ ಹೋಗಿ ಬರುವ ಸಂಬಂಧಿಕರು ವಾರ್ಡ್‌ನಿಂದ ಹೊರಬಂದು ಸಾರ್ವಜನಿಕರ ಮಧ್ಯೆ ತಿರುಗಾಡುತ್ತಿದ್ದು, ಆರೋಗ್ಯ ವಂತರಿಗೂ ಸೋಂಕು ಹರಡುವ ಸಾಧ್ಯತೆ ಇದೆ.
ಕೋವಿಡ್ ಆಸ್ಪತ್ರೆಯ ಸೋಂಕಿತರು ಇರುವ ವಾರ್ಡ್‌ಗೆ ವೈದ್ಯರು, ಆಸ್ಪತ್ರೆ ಸಿಬ್ಬಂದಿಗೆ ಮಾತ್ರ ಪ್ರವೇಶವಿದ್ದು, ಸೋಂಕಿತರ ಸಂಬಂಧಿ ಕರಿಗೆ ಪ್ರವೇಶ ನೀಡಿರುವುದು ಹೇಗೆ, ಪಿಪಿಇ ಕಿಟ್ ಧರಿಸದೇ ಸೋಂಕಿತರಿರುವ ವಾರ್ಡ್‌ನಲ್ಲಿ ಅವರ ಸಂಬಂ ಧಿಕರು ತಿರುಗಾಡಲು ಅವಕಾಶ ಇದೆಯೇ ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.
ಘಟನೆ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಉಮೇಶ್ ಪ್ರತಿಕ್ರಿಯಿಸಿ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್‌ಗೆ ಅವರ ಸಂಬಂಧಿಕರು ಅಥವಾ ಸಾರ್ವಜನಿಕರು ಪ್ರವೇಶಿಸಲು ಅವಕಾಶವಿಲ್ಲ. ವಾರ್ಡ್‌ನಿಂದ ಮೃತದೇಹ ತೆಗೆದು ಕೊಂಡು ಹೋಗುವ ಸಂದರ್ಭದಲ್ಲಿ ಯಾರೋ ವಿಡಿಯೋ ಮಾಡಿರಬಹುದು.
ಆ ರೀತಿಯ ಪರಿಸ್ಥಿತಿ ಜಿಲ್ಲಾಸ್ಪತ್ರೆಯಲ್ಲಿ ಇಲ್ಲ, ಕೋವಿಡ್ ಸೋಂಕಿತರಿಗೆ ವ್ಯವಸ್ಥಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಅಂತಹ ಘಟನೆ ನಡೆದಿದ್ದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಮತ್ತು ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಜಿಲ್ಲಾ ಸರ್ಜನ್ ಡಾ| ಮೋಹನ್‌ಕುಮಾರ್ ಅವರಿಗೆ ಸೂಚಿಸಿದ್ದೇನೆ ಎಂದರು.