ಚಿಕ್ಕಮಗಳೂರು: ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಿಸಲು ಮತ್ತು ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಕೋವಿಡ್ ಕಾರ್ಯಪಡೆಗೆ ನೀಡಲಾಗಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಭಾನುವಾರ ತಾಲೂಕಿನ ಲಕ್ಯಾ, ಬಿಳೇಕಲ್ಲಹಳ್ಳಿ, ಹಿರೇಗೌಜ ಗ್ರಾಪಂಗಳಲ್ಲಿ ಕೊರೊನಾ ನಿಯಂತ್ರಿಸಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಕೋವಿಡ್ ಕಾರ್ಯಪಡೆಯ ಸಭೆ ನಡೆಸಿ ಅವರು ಮಾತನಾಡಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿ ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದ್ದು, ಹಿರೇಗೌಜ, ಲಕ್ಯಾ ಹಾಗೂ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಜನರು ಜಾಗೃತರಾಗಬೇಕು ಎಂದರು.
ಲಸಿಕೆ ನೀಡಲು ಆದ್ಯತೆ ನೀಡಬೇಕು. ಹಿರೇಗೌಜದಲ್ಲಿ ಸ್ಮಶಾನ ಕೊರತೆ ಇದೆ. ಈ ಬಗ್ಗೆ ಸ್ಥಳವನ್ನು ಗುರುತಿಸಿ ಸ್ಮಶಾನ ಜಾಗ ನೀಡಲು ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಕಳಸಾಪುರದಲ್ಲಿ ಸಮುದಾಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತೆಯರ ಕೊರತೆ ಇದೆ. ಅಂಗವಿಕಲರಿಗೆ ಸ್ಥಳಕ್ಕೆ ತೆರಳಿ ಲಸಿಕೆ ನೀಡುವಂತೆ ತಿಳಿಸಲಾಗಿದೆ ಎಂದರು.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿ ಹಂತದಲ್ಲಿದೆ. ಮಾದರಸನಕರೆ ಹಾಗೂ ದಾಸರಹಳ್ಳಿಕೆರೆಗೆ ನೀರು ತುಂಬಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಮನೆ- ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕು. ಕೊರೊನಾ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು. ಹೊರಭಾಗದಿಂದ ಬಂದವರಿದ್ದಲ್ಲಿ ಮಾಹಿತಿ ಪಡೆದು ಕ್ವಾರಂಟೈನ್ ನಲ್ಲಿರಲು ಸೂಚಿಸಬೇಕು. ಹೋಂ ಐಸೋಲೇಷನ್ ನಲ್ಲಿರುವವರಿಗೆ, ಆಹಾರ, ಮೆಡಿಸನ್, ಲಸಿಕೆ ಸೇರಿದಂತೆ ಅಗತ್ಯತೆಗಳನ್ನು ಕಾರ್ಯಪಡೆ ಪೂರೈಸಬೇಕು. ಲಸಿಕೆ ಪಡೆದುಕೊಳ್ಳುವಂತೆ ಅರಿವು ಮೂಡಿಸಬೇಕು. ವಲಸೆ ಕಾರ್ಮಿಕರಿದ್ದಲ್ಲಿ ತಾತ್ಕಾಲಿಕ ನಿರಾಶ್ರಿತರ ಕೇಂದ್ರ ತೆರೆಯಬೇಕು. ಗ್ರಾಪಂ ಮಟ್ಟದಲ್ಲಿಯೂ ಕೋವಿಡ್ ಸಹಾಯವಾಣಿ ತೆರೆದು ಸೇವೆ ಒದಗಿಸುವಂತೆ ಸಲಹೆ ನೀಡಿದರು.
ತಹಶೀಲ್ದಾರ್ ಡಾ| ಕೆ.ಜೆ. ಕಾಂತರಾಜ್, ಇಒ ತಾರಾನಾಥ್ ಮತ್ತಿತರರು ಇದ್ದರು.