Advertisement

ಗ್ರಾಮಗಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು

09:38 PM May 23, 2021 | Team Udayavani |

ತರೀಕೆರೆ: ಪಟ್ಟಣ ಪ್ರದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ ಗ್ರಾಮಗಳಲ್ಲಿ ಸೋಂಕಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ತಾಲೂಕಿನ 26 ಗ್ರಾಪಂಗಳಲ್ಲಿ 508 ಪ್ರಕರಣಗಳು ದಾಖಲಾಗಿವೆ. ಜನತಾ ಕರ್ಪೂ ಇದ್ದರೂ ಸಹ ಗ್ರಾಮಗಳಲ್ಲಿ ಜನರ ಓಡಾಟ ಎಂದಿನಂತೆ ಇದೆ. ಅಂಗಡಿ- ಮುಂಗಟ್ಟುಗಳು ನಿಗದಿತ ಸಮಯಕ್ಕೆ ಮುಚ್ಚಿದ್ದರೂ ಸಹ ಅಂಗಡಿಗಳ ಬಳಿ ಜನರ ಓಡಾಟ ನಿಂತಿಲ್ಲ ಎಂಬ ಮಾತುಗಳು ಗ್ರಾಮಗಳಲ್ಲಿ ಕೇಳಿ ಬರುತ್ತಿವೆ.

Advertisement

ನಂದಿಬಟ್ಟಲು ಗ್ರಾಪಂ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿಲ್ಲ. ಲಕ್ಕವಳ್ಳಿ ಹೋಬಳಿಯ ಕರಕುಚ್ಚಿ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು 58 ಪ್ರಕರಣಗಳು ದಾಖಲಾಗಿವೆ. ಹುಣಸಘಟ್ಟ 43, ಬೇಲೇನಹಳ್ಳಿ 40, ಮುಡಗೋಡು 40, ಅಮೃತಾಪುರ 36, ಕುಡೂರು 35, ನೇರಲಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೆಂಚಿಕೊಪ್ಪ 2, ಕೊರೋನಹಳ್ಳಿ 3, ತಿಗಡ 2 ಪ್ರಮಾಣದಲ್ಲಿ ಸೋಂಕಿತರು ಕಂಡು ಬಂದಿದ್ದಾರೆ. ಇನ್ನುಳಿದ ಗ್ರಾಪಂಗಳಲ್ಲಿ ಸೋಂಕಿತರು ಇದ್ದಾರೆ. ಗ್ರಾಪಂ ಪಿಡಿಒ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್‌ ಸಮಿತಿ ರಚಿಸಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆ, ಶುಶ್ರೂಷಕಿ ಮತ್ತು ಗ್ರಾಪಂ ಅದ್ಯಕ್ಷರು ಇದರ ಸದಸ್ಯರಾಗಿರುತ್ತಾರೆ.

ಈ ಸಮಿತಿ ಗ್ರಾಮಗಳಲ್ಲಿ ಆಗು- ಹೋಗುಗಳ ಬಗ್ಗೆ ಆಗಾಗ ಸಭೆ ನಡೆಸಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮಗಳನ್ನು ಕೈಗೊಳ್ಳಲು ಅಧಿ ಕಾರ ನೀಡಲಾಗಿದೆ. ಗ್ರಾಮೀಣ ಭಾಗದ ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಟಂ ಟಂ, ಆಟೋ ಮತ್ತು ವಾಹನಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಪ್ರಚಾರವನ್ನು ಆಗಾಗ ಮಾಡಲಾಗುತ್ತಿದೆ. ಮನೆ- ಮನೆಗೆ ಭೇಟಿ ನೀಡಿ ತಪಾಸಣೆ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಸೋಂಕು ಹೆಚ್ಚಾಗಲು ಗ್ರಾಮಸ್ಥರು ಆಗಾಗ ನಗರ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು, ಕಾರಣವಿಲ್ಲದೆ ಓಡಾಡುವುದು, ಸಾಮಾಜಿಕ ಅಂತರ ಪಾಲನೆ ಮಾಡದೆ ಇರುವುದು ಮತ್ತು ಮಾಸ್ಕ್ ಧರಿಸದೆ ಓಡಾಡುತ್ತಿರುವುದು ಕಾರಣವಾಗಿದೆ. ಪಟ್ಟಣ ಪ್ರದೇಶದಲ್ಲಿ ತರಕಾರಿ ಮಾರುಕಟ್ಟೆ ಸಂಪೂರ್ಣ ಮುಚ್ಚಿರುವುದರಿಂದ ವ್ಯಾಪಾರಸ್ಥರು ಗ್ರಾಮಗಳಿಗೆ ಆಟೋ, ಮೋಟಾರ್‌ ಬೈಕ್‌ ಮೂಲಕ ಬಂದು ತರಕಾರಿ, ಹಣ್ಣು-ಹಂಪಲು ಮಾರುತ್ತಿರುವುದು ಇನ್ನೊಂದು ಕಾರಣವಾಗಿರಬಹುದಾಗಿದೆ.

ವ್ಯಾಪಾರಸ್ಥರಿಗೆ ಯಾವುದೇ ಪರೀಕ್ಷೆ ನಡೆಸದೆ ಮಾರಾಟಕ್ಕೆ ಅನುಮತಿ ನೀಡಿರುವುದು, ಅವರು ಸೋಂಕಿತರೇ ಎನ್ನುವುದು ಮೇಲ್ನೋಟಕ್ಕೆ ಕಂಡು ಬರದೆ ಇರುವುದು ಇನ್ನೊಂದು ಕಾರಣ. ಗ್ರಾಮಗಳಲ್ಲಿ ಇರುವ ಅರಳಿಕಟ್ಟೆ, ದೇವಸ್ಥಾನದ ಕಟ್ಟೆ, ಸಣ್ಣ ಹೊಟೇಲ್‌ಗ‌ಳಲ್ಲಿ ಆಗಾಗ ಗುಂಪು ಸೇರಿ ಹರಟೆ ಹೊಡೆಯುವ ದೃಶ್ಯ ಸಾಮಾನ್ಯ. ಇದು ಇನ್ನೊಂದು ಕಾರಣವೆನ್ನಬಹುದು. ಸೋಂಕಿತರನ್ನು ಗುರುತಿಸಿ ಅವರಿಗೆ ಔಷಧಿ ಕಿಟ್‌ ನೀಡಲಾಗಿದೆ.

ಸೋಂಕಿತರ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿದಿನ ಭೇಟಿ ನೀಡಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಹರಡದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮಗಳಲ್ಲಿ 10 ಗಂಟೆಗೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಸೋಂಕಿತರ ಮನೆ ಬೀದಿ ಮತ್ತು ಇನ್ನಿತರ ಭಾಗಗಳಲ್ಲಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ.

Advertisement

ಗ್ರಾಮಸ್ಥರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಮತ್ತು ದಂಡ ವಿಧಿ ಸಲಾಗುತ್ತಿದೆ. ಪಾಸಿಟಿವ್‌ ಕಂಡು ಬಂದವರು ಹೊರಗೆ ಸಂಚರಿಸಿದ್ದು ಕಂಡು ಬಂದಲ್ಲಿ ಅಂತಹವರ ವಿರುದ್ದ ಎಫ್‌ಐ. ಆರ್‌. ದಾಖಲು ಮಾಡಲಾಗುತ್ತದೆ. ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕ ಹೊಂದಿರುವವರು ಕೂಡ ಹೋಮ್‌ ಐಸೋಲೇಷನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ ಎಂದು ಕಾರ್ಯ ನಿರ್ವಾಹಕ ಅ ಧಿಕಾರಿ ಡಾ|ದೇವೇಂದ್ರಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next