Advertisement
ಕಡೂರು: ಮಹಾನಗರಗಳಿಂದ ಮರಳಿ ಬಂದವರ ಸಂಖ್ಯೆ ಹೆಚ್ಚಾಗಿದ್ದರಿಂದ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೊಟ್ಟೆಪಾಡಿಗಾಗಿ, ಜೀವನ ನಿರ್ವಹಣೆಗಾಗಿ ಅನಿವಾರ್ಯ ಪರಿಸ್ಥಿತಿಯಿಂದ ಬೆಂಗಳೂರು, ಮೈಸೂರು, ಮಂಗಳೂರು, ಕೊಡಗು ಸೇರಿದಂತೆ ಹೊರ ರಾಜ್ಯಗಳಲ್ಲೂ ವಿವಿಧ ಕೆಲಸಗಳಲ್ಲಿ ತೊಡಗಿದ್ದ ತಾಲೂಕಿನ ಬಹುಪಾಲು ಜನರು ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಅವರವರ ಸ್ವಗ್ರಾಮಗಳಿಗೆ ವಾಪಸ್ ಬಂದಿದ್ದಾರೆ.
Related Articles
Advertisement
ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಜನವರಿಯಿಂದ ಮಾರ್ಚ್‌ವರೆಗೆ ಕೇವಲ ಎರಡಂಕಿಯಲ್ಲಿದ್ದ ಸೋಂಕಿತರ ಪಟ್ಟಿ ಏಪ್ರಿಲ್ ತಿಂಗಳಲ್ಲಿ ಮೂರಂಕಿಗೆ ಜಿಗಿದಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಹಾನಗರಗಳಿಂದ ಮರಳಿ ಬಂದವರೇ ಪರೀಕ್ಷೆಗೆ ಒಳಪಡುತ್ತಿರುವುದರಿಂದ ತಾಲೂಕಿನ ಸೋಂಕಿತರ ಪಟ್ಟಿ ಆನೆಯ ಬಾಲದಂತೆ ಬೆಳೆಯುತ್ತಿದೆ.
ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತ ಇದನ್ನೆಲ್ಲ ಗಮನಿಸಿ ಪರೀಕ್ಷೆ, ಪರೀಕ್ಷೆಯ ನಂತರ ಹೋಂ ಐಸೋಲೇಷನ್ ಮತ್ತು ಹೆಚ್ಚಿನ ಚಿಕಿತ್ಸೆಗೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಬಹಳ ಮುಖ್ಯವಾಗಿ ತಾಲೂಕು ವೈದ್ಯಾ ಧಿಕಾರಿ ಡಾ| ಎಸ್.ಸಿ. ರವಿಕುಮಾರರ ನೇತೃತ್ವದಲ್ಲಿ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋಂಕಿತರು ಪತ್ತೆಯಾದರೆ ಅವರ ಅಕ್ಕಪಕ್ಕದ ಮನೆಗಳು ಸೇರಿದಂತೆ ಸಂಪೂರ್ಣ ಬೀದಿಯ ಜನರು ಅಥವಾ ಗ್ರಾಮದ ಜನರನ್ನೇ ಪರೀಕ್ಷೆಗೆ ಒಳಪಡಿಸುತ್ತಿರುವುದು ಅತ್ಯಂತ ಸಮಾಧಾನಕರವಾದ ಬೆಳವಣಿಗೆಯಾಗಿದೆ.
ಇದರಿಂದ ಸೋಂಕಿತರ ಚಿಕಿತ್ಸೆಯು ಸುಲಭವಾಗುತ್ತಿದೆ. ರೋಗದ ಹರಡುವಿಕೆಯ ತೀವ್ರತೆಯನ್ನು ಕಟ್ಟಿ ಹಾಕಲಾಗುತ್ತಿದೆ. ಶಾಸಕ ಬೆಳ್ಳಿಪ್ರಕಾಶ್ ಅವರ ಪ್ರಯತ್ನದ ಫಲವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ 50 ಹಾಸಿಗೆಯ ಕೋವಿಡ್ ಸೆಂಟರ್ ಆರಂಭವಾಗಿದ್ದು ಅದು ಕೂಡ ಭರ್ತಿಯಾಗಿದೆ. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಎಸ್.ವಿ.ದೀಪಕ್ ನೇತೃತ್ವದಲ್ಲಿ ತಜ್ಞ ವೈದ್ಯರಾದ ಡಾ| ಎಚ್.ಎಸ್. ಮೋಹನ್, ಡಾ| ಗುರುಮೂರ್ತಿ, ಡಾ| ಶಿವಪ್ರಸಾದ್ ಸೇರಿದಂತೆ ದಾದಿಯರು ಹಾಗೂ ಡಿ- ದರ್ಜೆ ನೌಕರರು ಹಗಲಿರುಳು ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಕೋವಿಡ್ ಮೊದಲ ಅಲೆಗಿಂತ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ತಾಲೂಕಿನಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಏಪ್ರಿಲ್ ತಿಂಗಳಲ್ಲಿ 10 ರೋಗಿಗಳು ಸಾವನ್ನಪ್ಪಿದರೆ ಮೇ ತಿಂಗಳ 13ರ ವೇಳೆಗೆ 35 ರೋಗಿಗಳು ಸಾವನ್ನಪ್ಪಿರುವುದು ರೋಗದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಅದರ ಜೊತೆಗೆ ಜನಸಾಮಾನ್ಯರ ಉದಾಸೀನತೆಯನ್ನು ತೋರಿಸುತ್ತದೆ.