ತರೀಕೆರೆ: ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಿವೃತ್ತ ಉಪ ತಹಶೀಲ್ದಾರ್ ಸೋಮ್ಲನಾಯ್ಕ (72) ಡೆತ್ ನೋಟ್ ಬರೆದಿಟ್ಟು ಸಮೀಪದ ಬೇಲೇನಹಳ್ಳಿ ಗ್ರಾಮದ ತೋಟದಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬೇಲೇನಹಳ್ಳಿ ಗ್ರಾಮದ ಬಳಿ ಇರುವ ತೋಟಕ್ಕೆ ತೆರಳಿದ ಸೋಮ್ಲನಾಯ್ಕ ಕಾರಿನಲ್ಲಿ ಕುಳಿತು ತಮ್ಮ ಬಳಿ ಇದ್ದ ಸಿಂಗಲ್ ಬ್ಯಾರಲ್ ಕೋವಿಯಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?: ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಬೇಲೇನಹಳ್ಳಿ ತಾಂಡಾದ ಬಳಿ ತೋಟ ಮಾಡಿಕೊಂಡು ಇದ್ದ ಅವರಿಗೆ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ತಗುಲಿತ್ತು. ನನ್ನಿಂದ ಕುಟುಂಬದವರಿಗೂ ಸೋಂಕು ತಗುಲಬಹುದು. ನನಗೆ ವಯಸ್ಸಾಗಿದ್ದು ಬದುಕುವ ಭರವಸೆ ಕಡಿಮೆ ಇದೆ. ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರು ಏನಾದರೂ ಆದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ನನಗೆ ಕೊರೊನಾ ಪಾಸಿಟಿವ್ ಇರುವ ಕಾರಣ ಅಗ್ನಿಸ್ಪರ್ಶ ಮಾಡಲು ಅನುಕೂಲವಾಗುವಂತೆ ಜಾಗ ಆರಿಸಿಕೊಂಡಿದ್ದೇನೆ.
ಇದು ಪ್ರಪಂಚಕ್ಕೆ ಆದ ಕೆಟ್ಟ ಕಾಯಿಲೆ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ. ನಿಮ್ಮ ಜೀವನಕ್ಕೆ ದಾರಿ ಮಾಡಿದ್ದೇನೆ. ನನಗೆ ಈ ಜೀವನ ಸಾಕು ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಚಂದ್ರಮ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.