Advertisement

ಸಭ್ಯ ಉಡುಗೆಯಲ್ಲಿ ಬಂದ್ರೆ ಮಾತ್ರ ಬೆಟ್ಟ ಹತ್ತಿ: ಸಂದೇಶ ವೈರಲ್‌

06:30 AM Nov 05, 2018 | |

ಚಿಕ್ಕಮಗಳೂರು: ನ.6 ರಿಂದ ಆರಂಭಗೊಳ್ಳುವ ದೇವಿರಮ್ಮ ಜಾತ್ರಾಮಹೋತ್ಸವಕ್ಕಾಗಿ ದೇವಿರಮ್ಮ ಬೆಟ್ಟ ಹತ್ತುವ ಭಕ್ತರು ಸಭ್ಯತೆಯಿಂದ ಬರುವಂತೆ ಬಜರಂಗದಳದ ಕಾರ್ಯರ್ತರು ಎಚ್ಚರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ವರ್ಷಕ್ಕೊಮ್ಮೆ ಮಾತ್ರ ದೇವಿರಮ್ಮ ಬೆಟ್ಟ ಹತ್ತಲಾಗುತ್ತದೆ. ಕಾಡುಮೇಡುಗಳಲ್ಲಿ ದಾರಿ ಮಾಡಿಕೊಂಡು ಬೆಟ್ಟವೇರಬೇಕು. ಮಲೆನಾಡಿನ ವಿಶಿಷ್ಟ ಆಚರಣೆಗಳಲ್ಲಿ ದೇವಿರಮ್ಮ ಬೆಟ್ಟ ವೇರುವ ಪದ್ಧತಿಯೂ ಒಂದಾಗಿದೆ. ದೀಪಾವಳಿ ಹಬ್ಬದ ಹಿಂದಿನ ದಿನ ದೇವಿರಮ್ಮ ಬೆಟ್ಟ ಹತ್ತಲು ಸಾವಿರಾರು ಭಕ್ತರು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುತ್ತಾರೆ. ಬೆಟ್ಟಕ್ಕೆ ಬರುವ ಭಕ್ತರು ಸಭ್ಯತೆಯಿಂದ ಬರಬೇಕು. ಬಜರಂಗದಳದ ಸ್ವಯಂ ಸೇವಕರ ತಂಡ ಅಲ್ಲಲ್ಲಿ ಇರುತ್ತಾರೆ. ಸಭ್ಯತೆ ಮೀರಿದರೆ ಸ್ಥಳದಿಂದ ವಾಪಸ್‌ ಕಳುಹಿಸಲಾಗುವುದು ಎಂಬ ಸಂದೇಶ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ಮತ್ತು ವಾಟ್ಸಪ್‌ಗ್ಳಲ್ಲಿ ಜಿಲ್ಲಾದ್ಯಂತ ಹರಿದಾಡುತ್ತಿದ್ದು, ಫೇಸ್‌ಬುಕ್‌ ಪೋಸ್ಟ್‌ ಈಗ ವೈರಲ್‌ ಆಗಿದೆ.

ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಸಹೋದರ ಸಹೋದರಿಯರೇ ಸಭ್ಯತೆಯ ಉಡುಗೆಯನ್ನು ತೊಡದೆ ಬರುವ ಹೆಣ್ಮಕ್ಕಳನ್ನು ದೇವಿರಮ್ಮ ಬೆಟ್ಟಕ್ಕೆ ಹತ್ತಲು ಬಿಡಬೇಡಿ. ಚಡ್ಡಿಧರಿಸಿ ಬರುವ ಹುಡುಗ, ಹುಡುಗಿಯರನ್ನೂ ಬೆಟ್ಟ ಹತ್ತಲು ಬಿಡಬೇಡಿ. ಸಾಧ್ಯವಾದರೆ ಪುರುಷರು ಪಂಚೆ(ಲುಂಗಿ) ಹಾಗೂ ಮಹಿಳೆಯರು ಸೀರೆ ಅಥವಾ ಚೂಡಿದಾರ್‌ ಧರಿಸಿ ಆಗಮಿಸಿ ಎಂದು ಬರೆದಿದ್ದು, ಬಜರಂಗದಳದ ಎಚ್ಚರಿಕೆ ಪೋಸ್ಟ್‌ಗೆ ಅನೇಕ ಲೈಕ್‌ ಮತ್ತು ಕಮೆಂಟ್‌ಗಳು ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next