Advertisement

ಶಿಥಿಲ ವಾಣಿಜ್ಯ ಮಳಿಗೆ ನೆಲಸಮ

01:01 PM Nov 07, 2019 | Naveen |

ಚಿಕ್ಕಜಾಜೂರು: ಸುಮಾರು 60 ವರ್ಷಗಳ ಹಿಂದೆ ನಿರ್ಮಾಣವಾದ ಸ್ಥಳೀಯ ಗ್ರಾಮ ಪಂಚಾಯತ್‌ ಅಧೀನದಲ್ಲಿದ್ದ ವಾಣಿಜ್ಯ ಮಳಿಗೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದವು. ಈ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಶಿಥಿಲಗೊಂಡ ಕಟ್ಟಡಗಳನ್ನು ನೆಲಸಮ ಮಾಡಲಾಯಿತು.

Advertisement

ಗ್ರಾಮ ಪಂಚಾಯತ್‌ನವರು ಮಳಿಗೆಗಳನ್ನು ಕೆಡವಿರುವುದರಿಂದ ಮಳಿಗೆಗಳ ಮುಂದೆ ಬೀದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳು ಕಂಗಾಲಾಗಿವೆ. ಮಳಿಗೆಗಳು ಮತ್ತೆ ನಿರ್ಮಾಣವಾಗುವವರೆಗೂ ಎಲ್ಲಿ ವ್ಯಾಪಾರ ಮಾಡಬೇಕು ಎಂದು ಅಳಲು ವ್ಯಕ್ತಪಡಿಸಿದರು.

ವ್ಯಾಪಾರವನ್ನು ನಂಬಿಕೊಂಡು ಸಾಲ ಪಡೆದು ವ್ಯಾಪಾರ ಮಾಡುತ್ತಿದ್ದೇವೆ. ಅಲ್ಪ ಸ್ವಲ್ಪ ಹಣವನ್ನುಕೂಡಿಟ್ಟು ತಿಂಗಳ ಕೊನೆಗೆ ಸಾಲ ತೀರಿಸಿ ಮಿಕ್ಕುಳಿದ ಹಣದಲ್ಲಿ ಮನೆ ಖರ್ಚು ನೋಡಿಕೊಂಡು ಜೀವನ ಮಾಡುತ್ತಿದ್ದೆವು. ಈಗ ಸಾಲಗಾರರಿಗೆ ಹೇಗೆ ಹಣ ಹೊಂದಿಸುವುದು, ಕುಟುಂಬದ ನಿರ್ವಹಣೆ ಹೇಗೆ ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ.

ಹಾಗಾಗಿ ಮಳಿಗೆ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿಕೊಡಬೇಕು ಎಂದು ಬೀದಿಬದಿ ವ್ಯಾಪಾರಿಗಳಾದ ಫಾಲಾಕ್ಷಯ್ಯ, ಕೆಂಚಪ್ಪ, ಧರಣೇಶ್‌, ಯೋಗೀಶ್‌, ವಾಸುದೇವಮೂರ್ತಿ, ಈರಮ್ಮ, ತರಕಾರಿ ಪ್ರಸನ್ನ, ತಿಮ್ಮಣ್ಣ, ಸಂತೋಷ್‌, ರಾಜಶೇಖರ್‌, ಜಯಮ್ಮ, ಭಾರತಮ್ಮ, ಮಾಲಾ,ಬಸವರಾಜಪ್ಪ ತಿಳಿಸಿದರು.

2 ತಿಂಗಳ ಹಿಂದೆಯೇ ಮಾಹಿತಿ ನೀಡಿದ್ದೆವು: ಮಳಿಗೆ ನೆಲಸಮಗೊಳಿಸಿದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಚಿಕ್ಕಜಾಜೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಡಿ.ಸಿ. ಮೋಹನ್‌, ಆರು ದಶಕಗಳ ಹಿಂದೆ ಮಂಡಲ ಪಂಚಾಯತ್‌ ನಿರ್ಮಿಸಿದ್ದ ಸುಮಾರು 18 ಮಳಿಗೆಗಳು ಹಾಗೂ ನಂತರದ ವರ್ಷಗಳಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣವಾದ 9 ಮಳಿಗೆಗಳು ಸಂಪೂರ್ಣ ಶಿಥಿಲವಾಗಿದ್ದವು. ಮೇಲ್ಛಾವಣಿಯ ಹೆಂಚು, ತಗಡಿನ ಶೀಟ್‌ಗಳು ಮುರಿದು ಹಾಳಾಗಿದ್ದವು.

Advertisement

ಮಳೆ ಬಂದರೆ ಮಳಿಗೆಗಳು ಸೋರುತ್ತಿವೆ. ಕೆಲವು ಕೊಠಡಿಗಳ ಕಿಟಕಿ, ಬಾಗಿಲುಗಳು ಮುರಿದು ಹೋಗಿವೆ. ಗೋಡೆಗಳು ಬಿರುಕು ಬಿಟ್ಟಿವೆ ಎಂದು ಸಾರ್ವಜನಿಕವಾಗಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಹಳೆಯ ಮಳಿಗೆಗಳನ್ನು ನೆಲಸಮ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಗ್ರಾಮ ಪಂಚಾಯತ್‌ ಸರ್ವ ಸದಸ್ಯರ ಸಭೆಯಲ್ಲಿ ಶಿಥಿಲಾವಸ್ಥೆಯ ಕಟ್ಟಡಗಳನ್ನು ಕೆಡವಲು ತೀರ್ಮಾನಿಸಲಾಗಿತ್ತು. ಈ ಬಗ್ಗೆ ಮಳಿಗೆದಾರರಿಗೆ ಎರಡು ತಿಂಗಳ ಮೊದಲೇ ಮಾಹಿತಿ ನೀಡಲಾಗಿತ್ತು. ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ನೂತನ ಮಳಿಗೆಗಳ ಪುನರ್‌ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 50 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಗ್ರಾಪಂನ 14ನೇ ಹಣಕಾಸು ಮತ್ತು ಇನ್ನಿತರ ಯೋಜನೆಗಳ ಅಡಿ 25 ಲಕ್ಷ ರೂ. ನೀಡಲಾಗುವುದು. ಟೆಂಡರ್‌ ಕರೆದು ಕಟ್ಟಡ ನಿರ್ಮಾಣ ಮಾಡಲಾಗುವುದು. ಸ್ಥಳೀಯರಿಗೆ ವ್ಯಾಪಾರ, ವ್ಯವಹಾರಕ್ಕಾಗಿ ಅನುಕೂಲವಾಗಲೆಂದು ಸುಮಾರು 75 ಲಕ್ಷರೂ ವ್ಯಯಿಸಿ ಸುಸಜ್ಜಿತವಾದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಕೊಡಲಾಗುವುದು. ಮಳಿಗೆ ಕಾಮಗಾರಿ ಮುಗಿದ ನಂತರ ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ ಈ ಮೊದಲು ವ್ಯಾಪಾರ ಮಾಡುತ್ತಿದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಉಳಿದ ಮಳಿಗೆಗಳನ್ನು ಹರಾಜಿನ ಮೂಲಕ ಬಾಡಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next