ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಪೋಲಿಸ್‍ಠಾಣೆಯ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನು ಬಂಧಿಸಿ 2 ಲಕ್ಷ 33 ಸಾವಿರ ಮೌಲ್ಯದ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರದ ನಗರದ ಶೇಖ್ ಇಲಿಯಾಜ್ ಉರುಫ್ ಇಲ್ಲು ಬಿನ್ ಅಮೀರ್ ಬಾಷಾ(33), ಎಸ್.ನಿಝಾಂ ಬಿನ್ ನಿಸಾರ್ ಅಹಮದ್ (24) ಬಂಧಿತ ಆರೋಪಿಗಳು.
ಗೌರಿಬಿದನೂರಿನ ಪ್ರಶಾಂತ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಕೆ.ಎನ್.ಸತೀಶ್ ಅವರ ಮನೆಯಲ್ಲಿ ನಡೆದ ಕಳ್ಳತನದ ಪ್ರಕರಣವನ್ನು ಭೇದಿಸಲು ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮತ್ತು ಡಿವೈಎಸ್ಪಿ ಕೆ.ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಗೌರಿಬಿದನೂರು ಸಿಪಿಐ ಎಸ್.ರವಿ ಮತ್ತು ನಗರ ಪೋಲಿಸ್‍ಠಾಣೆಯ ಪಿಎಸ್‍ಐ ಚಂದ್ರಕಲಾ ಮತ್ತು ಸಿಬ್ಬಂದಿಯನ್ನು ಒಳಗೊಂಡಂತೆ ತಂಡವನ್ನು ರಚಿಸಲಾಗಿತ್ತು ಈ ತಂಡವು ಗೌರಿಬಿದನೂರು ನಗರದಲ್ಲಿ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಆಂಧ್ರಪ್ರದೇಶದ ಹಿಂದೂಪುರದ ನಗರದ ಶೇಖ್ ಇಲಿಯಾಜ್ ಉರುಫ್ ಇಲ್ಲು ಹಾಗೂ ಎಸ್.ನಿಝಾಂ ಎಂಬುವರನ್ನು ವಿಚಾರಣೆಗೊಳಪಡಿಸಿದಾಗ ಗೌರಿಬಿದನೂರಿನಲ್ಲಿ ನಡೆದ ಕಳ್ಳತನವನ್ನು ತಾವೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಆರೋಪಿಗಳು ನೀಡಿದ ಸುಳಿವಿನ ಮೇರೆಗೆ 2 ಲಕ್ಷ 33 ಸಾವಿರ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯ ಮುಂದಿನ 15 ದಿನಗಳವರೆಗೆ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆಯೆಂದು ಪೋಲಿಸರು ತಿಳಿಸಿದ್ದಾರೆ.
ಇದನ್ನೂ ಓದಿ:ವೈಟ್‌ಹೌಸ್ ಮಾಧ್ಯಮ ಸಹ ಕಾರ್ಯದರ್ಶಿಯಾಗಿ ವೇದಾಂತ್ ಪಟೇಲ್ ಆಯ್ಕೆ
ಬಂಧಿತ ಆರೋಪಿಗಳಲ್ಲಿ ಶೇಖ್ ಇಲಿಯಾಸ್ ಉರುಫ್ ಇಲ್ಲು ಕುಖ್ಯಾತ ಕಳ್ಳನಾಗಿದ್ದು ಈತ ಮಂಚೇನಹಳ್ಳಿ ಪೋಲಿಸ್ ಠಾಣೆಯಲ್ಲಿ ನಡೆದ 3 ಕಳುವು ಪ್ರಕರಣ,ಗುಡಿಬಂಡೆಯಲ್ಲಿ ನಡೆದ 2 ಕಳುವು ಹಾಗೂ ಶಿಡ್ಲಘಟ್ಟ ನಗರ ಪೋಲಿಸ್‍ಠಾಣೆಯಲ್ಲಿ ನಡೆದ 1 ಕಳುವು ಪ್ರಕರಣದಲ್ಲಿ ಮತ್ತು ಆಂಧ್ರಪ್ರದೇಶದ ಹಿಂದೂಪುರ,ಲೇಪಾಕ್ಷಿ,ಹೈದರಾಬಾದ್ ನಗರದ ವಿವಿಧ ಪೋಲಿಸ್‍ಠಾಣೆಗಳಲ್ಲಿ ಸುಮಾರು 15ಕ್ಕೂ ಅಧಿಕ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕೆಲವು ಪ್ರಕರಣಗಳಲ್ಲಿ ನ್ಯಾಯಾಯಲಯಕ್ಕೆ ಹಾಜರಾಗದೆ ತಲೆ ಮರಿಸಿಕೊಂಡಿದ್ದರು.
ಅದೇ ರೀತಿ ಆರೋಪಿ ಎಸ್.ನಿಝಾಂ ಸಹ ಶೇಖ್ ಇಲಿಯಾಸ್ ಉರುಫ್ ಇಲ್ಲು ಎಂಬಾತನ ಸಹಪಾಠಿಯಾಗಿದ್ದು ಈತನು ಸಹ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದು ಈ ಸಂಬಂಧ ಗೌರಿಬಿದನೂರು ನಗರ ಪೋಲಿಸ್‍ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.