Advertisement
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಆರೂರು ಬಳಿ ನಿರ್ಮಾಣವಾಗುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಕಾಮಗಾರಿ ವೇಗವಾಗಿಯೇ ನಡೆಯುತ್ತಿದ್ದು, ಮೋಲ್ಡ್ ಹಾಕುವ ಸಲುವಾಗಿ ಶೀಟ್ ಸೆಂಟ್ರಿಂಗ್ ಕುಸಿದು ಬಿದ್ದು, ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆಯೆಂದು ದೂರು ಕೇಳಿ ಬಂದಿದೆ. ಸದ್ಯ 9 ಮಂದಿ ಕಾರ್ಮಿಕರು ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ತನಿಖೆಗೆ ಡೀಸಿ ಸೂಚನೆ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜಿನ ಕೊನೆಯ ಹಂತದ ಸ್ಲಾಬ್ ಹಾಕುವ ವೇಳೆಯಲ್ಲಿ ಕುಸಿತದಿಂದ 9 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ದೇವರ ದಯೆಯಿಂದ ಅವರೆಲ್ಲಾ ಪ್ರಾಣಾಪಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ತುರ್ತಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಒದಗಿಸಲಾಗಿದೆ ಎಂದರು.
ಸುಧ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಘಟನೆ ಹೇಗೆ ಆಗಿದೆ ಎಂಬುದರ ಕುರಿತು ಎಂಜಿನಿಯರ್‌ಗಳು ತಾಂತ್ರಿಕವಾಗಿ ಪರಿಶೀಲನೆ ಮಾಡಿ ಹೇಳಬೇಕಾಗುತ್ತದೆ 20*30 ಮೀಟರ್ ಲೆಕ್ಚರ್ ಹಾಲ್ ಸ್ಟೀಲ್‌ಫ್ರೇಂ ಹಾಕಿ ಸ್ಲಾಬ್ ಹಾಕಿದ್ದಾರೆ. ಕಾಂಕ್ರೇಟ್ ಹಾಕುವ ವೇಳೆ ಭಾರಕ್ಕೆ ಕುಸಿತವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕುರಿತು ಪರಿಶೀಲನೆ ಮಾಡಲು ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ಶಾಖೆಯ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ತಾಂತ್ರಿಕವಾಗಿ ಸಣ್ಣಪುಟ್ಟ ದೋಷ ಇರಬಹುದು. ಆ ದೋಷವನ್ನು ಪರಿಶೀಲಿಸಿ ಸರಿಪಡಿಸಲು ನಿರ್ದೇಶನ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ರಾತ್ರಿ ವೇಳೆಯಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಅದಕ್ಕೆ ಕಾನೂನಿನಲ್ಲಿಯೂ ಅವಕಾಶ ಇದೆ. ನಾನು ಕೂಡ ಪದೇ ಪದೇ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದೇನೆ. ಅಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕಾಮಗಾರಿ ನಡೆಸಲಾಗುತ್ತಿದೆ. ಆ ಸ್ಥಳದಲ್ಲಿ ಸಾಕಷ್ಟು ಬೆಳಕಿದ್ದು, ಕಾರ್ಮಿಕರು ಹೆಲ್ಮೇಟ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಘಟನೆ ನಡೆದಿರುವುದು ದುರಾದೃಷ್ಠಕರ, ಹೀಗಾಗಬಾರದಿತ್ತು ಎಂದ ಅವರು ತಾಂತ್ರಿಕವಾಗಿ ವರದಿ ಬರಲಿ ಆನಂತರ ನೋಡೋಣ ಎಂದರು.