Advertisement
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು ಮಂಗಳವಾರ ಹೊಸದಾಗಿ 3 ಪಾಸಿಟೀವ್ ಪ್ರಕರಣಗಳು ಕಂಡು ಬಂದು ಇದುವರೆಗೂ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 268ಕ್ಕೆ ಏರಿಕೆ ಕಂಡಿದೆ. ಹೊಸ ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ ನಗರದಲ್ಲಿ 2, ಚಿಂತಾಮಣಿ ನಗರದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಮೂವರಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನಾಗಿದ್ದಾನೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟೀವ್ ಪ್ರಕರಣಗಳ ಒಂದಡೆ ಏರಿಕೆಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ತೀವ್ರ ಆತಂಕದ ಕ್ಷಣಗಳನ್ನು ಸೃಷ್ಟಿಸಿದ್ದರೆ ಅಷ್ಟೆ ಸಾವಿನ ಪ್ರಕರಣಗಳು ವರದಿಯಾಗಿ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಸತತ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ವರದಿಯಾಗಿದ್ದು ಚಿಕ್ಕಬಳ್ಳಾಪುರದಲ್ಲಿ 45 ವರ್ಷದ ವ್ಯಕ್ತಿ ತೀವ್ರ ಉಸಿರಾಟದಿಂದ ಆಸ್ಪತ್ರೆ ಸೇರಿದ್ದು ಆತನಿಗೆ ಕೋವಿಡ್-19 ಪಾಸಿಟೀವ್ ಬಂದಿದ್ದು ಮಂಗಳವಾರ ಚಿಕಿತ್ಸೆ ಫಲಿಸದೇ ಮೃತ ಪಟ್ಟಿರುವುದರಿಂದ ಚಿಕ್ಕಬಳ್ಳಾಪುರದಲ್ಲಿ ಕೋವಿಡ್-19 ಸಾವಿನ ಸಂಖ್ಯೆ 4ಕ್ಕೆ ಏರಿದರೆ ಇಡೀ ಜಿಲ್ಲೆಯಲ್ಲಿ 9ಕ್ಕೆ ಏರಿದೆ. ಈಗಾಗಲೇ ಚಿಕ್ಕಬಳ್ಳಾಪುರ 4, ಗೌರಿಬಿದನೂರು 4, ಚಿಂತಾಮಣಿ 1 ಒಬ್ಬರು ಕೋವಿಡ್-19ಗೆ ಬಲಿಯಾಗಿದ್ದಾರೆ.