ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಒಟ್ಟಾರೆ ಕೋವಿಡ್-19 ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು ಬುಧವಾರ ಒಂದೇ ದಿನ 108 ಕೋವಿಡ್-19 ಸೋಂಕಿತರು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಪಾಸಿಟೀವ್ ಪ್ರಕರಣಗಳ ಸಂಖ್ಯೆ 1,101ಕ್ಕೆ ತಲುಪಿದೆ.
ಸತತ ವಾರದಿಂದ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಎರಡಂಕಿ, ಮೂರಂಕಿಯಲ್ಲಿ ಏರುತ್ತಲೇ ಇರುವ ಪರಿಣಾಮ ಜಿಲ್ಲೆಯುಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಸಾವಿರ ಗಡಿ ದಾಟಿದ್ದು ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ ಇನ್ನುಷ್ಟು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಹೊಸದಾಗಿ ಕಂಡು ಬಂದಿರುವ 108 ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರದಲ್ಲಿ ಬರೋಬ್ಬರಿ 38 ಆದರೆ ಬಾಗೇಪಲ್ಲಿ 8, ಚಿಂತಾಮಣಿ 23, ಗೌರಿಬಿದನೂರು 21, ಗುಡಿಬಂಡೆ 4 ಹಾಗೂ ಶಿಡ್ಲಘಟ್ಟದಲ್ಲಿ ಒಟ್ಟು 14 ಪಾಸಿಟೀವ್ ಪ್ರಕರಣಗಳು ಕಂಡು ಬಂದಿವೆ. ಬುಧವಾರ 51 ಮಂದಿ ಡಿಸ್ಚಾರ್ಜ್ ಆಗಿದ್ದು ಒಟ್ಟಾರೆ 494 ಮಂದಿ ಬಿಡುಗಡೆಯಾಗಿ 584 ಪ್ರಕರಣ ಇನ್ನೂ ಸಕ್ರಿಯವಾಗಿವೆ. ಒಟ್ಟು ಸೋಂಕಿತ ಪ್ರಕರಣಗಳಲ್ಲಿ ಚಿಕ್ಕಬಳ್ಳಾಪುರ 386, ಬಾಗೇಪಲ್ಲಿ 145, ಚಿಂತಾಮಣಿ 176. ಗೌರಿಬಿದನೂರು 291, ಗುಡಿಬಂಡೆ 30 ಹಾಗೂ ಶಿಡ್ಲಘಟ್ಟದಲ್ಲಿ 73 ಪ್ರಕರಣಗಳು ಇವೆ.
22ಕ್ಕೆ ಸಾವಿನ ಸಂಖ್ಯೆ:
ಜಿಲ್ಲೆಯಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ ಇದುವರೆಗೂ 22ಕ್ಕೆ ಏರಿಕೆ ಕಂಡಿದೆ. ಶಿಡ್ಲಘಟ್ಟ ಹಾಗೂ ಗುಡಿಬಂಡೆಯಲ್ಲಿ ಸಾವಿನ ಪ್ರಕರಣ ದಾಖಲಾದ ಬೆನ್ನಲೇ ಗೌರಿಬಿದನೂರಲ್ಲಿ ಸೋಂಕಿತರೊಬ್ಬರು ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ. 22 ಸಾವಿನ ಪ್ರಕರಣಗಳಲ್ಲಿ ಚಿಕ್ಕಬಳ್ಳಾಪುರ 9, ಗೌರಿಬಿದನೂರು 7, ಶಿಡ್ಲಘಟ್ಟ, ಚಿಂತಾಮಣಿಯಲ್ಲಿ ತಲಾ 2 ಹಾಗೂ ಗುಡಿಬಂಡೆಯಲ್ಲಿ 1 ಪ್ರಕರಣ ದಾಖಲಾಗಿದೆ.