Advertisement

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ ಆಧಿಸೂಚನೆ ಪ್ರಕಟ

09:29 PM Jan 21, 2020 | Lakshmi GovindaRaj |

ಚಿಕ್ಕಬಳ್ಳಾಪುರ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ರಾಜ್ಯ ಚುನಾವಣಾ ಆಯೋಗ ಜಿಲ್ಲೆಯ ಚಿಕ್ಕಬಳ್ಳಾಪುರ ನಗರಸಭೆಯ ಒಟ್ಟು 31 ವಾರ್ಡ್‌ಗಳಿಗೆ ಚುನಾವಣಾ ವೇಳಾಪಟ್ಟಿ ಹೊರಡಿಸಿದ್ದು, ಅದರನ್ವಯ ಫೆ.9ಕ್ಕೆ ನಗರಸಭೆಗೆ ಚುನಾವಣೆ ನಡೆಸಲು ಜಿಲ್ಲೆಯ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಪ್ರಕಟಿಸಿದ್ದಾರೆ.

Advertisement

28ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ: ಜಿಲ್ಲಾಧಿಕಾರಿಗಳು ಹೊರಡಿಸಿರುವ ಅಧಿಸೂಚನೆಯಂತೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಜ.28 ಕೊನೆ ದಿನವಾಗಿದೆ. ಜ.29 ರಂದು ನಾಮಪತ್ರಗಳ ಪರಿಶೀಲಿಸುವ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಜ.31 ಕೊನೆ ದಿನವಾಗಿದೆ.

ಚುನಾವಣಾ ಅಧಿಕಾರಿಗಳ ನೇಮಕ: ನಗರಸಭೆಯ ಒಟ್ಟು 31 ವಾರ್ಡ್‌ಗಳಿಗೆ ಸುಗಮ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು 01 ರಿಂದ 8 ವಾರ್ಡ್‌ವರೆಗೆ ಚುನಾವಣಾಧಿಕಾರಿ ಆಗಿ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿದ್ದು, ಅವರ ಮೊ.ಸಂ : 9448999242 ಸಂಪರ್ಕಿಸಬಹುದು. ಅವರ ಕಾರ್ಯಾಲಯ- ಕಾರ್ಯಪಾಲಕ ಅಭಿಯಂತರರ ಕಾರ್ಯಾಲಯ, ಲೋಕೋಪಯೋಗಿ, ಬಂದರು ಮತ್ತು ಜಲಸಾರಿಗೆ ಇಲಾಖೆ, ಹಳೇ ಜಿಲ್ಲಾ ಆಸ್ಪತ್ರೆ ರಸ್ತೆ, ಚಿಕ್ಕಬಳ್ಳಾಪುರ ನಗರ.

9ರಿಂದ 16ರ ವರೆಗೆ ವಾರ್ಡ್‌: ಅದೇ ರೀತಿ 09 ರಿಂದ 16ರ ವಾರ್ಡ್‌ವರೆಗೆ ಚುನಾವಣಾಧಿಕಾರಿ ಆಗಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ವಿ.ಶ್ರೀನಿವಾಸರೆಡ್ಡಿ ನೇಮಿಸಿದ್ದು ಅವರ ಮೊ.ಸಂ.: 9880307224, ಸಂಪರ್ಕಿಸಬಹುದು. ಕಾರ್ಯಾಲಯ- ಕಾರ್ಯಪಾಲಕ ಅಭಿಯಂತರರ ಕಾರ್ಯಾಲಯ, ಜಿಲ್ಲಾ ಪಂಚಾಯಿತ್‌ ರಾಜ್‌ ತಾಂತ್ರಿಕ ವಿಭಾಗ, ಪಿಳ್ಳಪ್ಪ ಕಾಂಪ್ಲೆಕ್ಸ್‌, ಎಂ.ಜಿ.ರಸ್ತೆ, ಚಿಕ್ಕಬಳ್ಳಾಪುರ ನಗರ.

17 ರಿಂದ 24ರ ವಾರ್ಡ್‌: ಚುನಾವಣಾಧಿಕಾರಿ ಆಗಿ ತಾಪಂ ಇಒ ಹರ್ಷವರ್ಧನ್‌ರನ್ನು ನೇಮಿಸಲಾಗಿದ್ದು ಅವರ ಮೊ.ಸಂ.:9480859105 ಸಂಪರ್ಕಿಸಬಹುದು. ಚುನಾವಣಾಧಿಕಾರಿಗಳ ಕಾರ್ಯಾಲಯ-ನಗರಸಭಾ ಕಾರ್ಯಲಯ, ಚಿಕ್ಕಬಳ್ಳಾಪುರ ನಗರ.

Advertisement

25 ರಿಂದ 31ರ ವಾರ್ಡ್‌: ಚುನಾವಣಾಧಿಕಾರಿ ಆಗಿ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಕುಮಾರ್‌ರನ್ನು ನೇಮಕ ಮಾಡಲಾಗಿದ್ದು, ಅವರ ಮೊ.ಸಂ. : 9448143687 ಸಂಪರ್ಕಿಸಬಹುದು. ಚುನಾವಣಾಧಿಕಾರಿಗಳ ಕಾರ್ಯಾಲಯ- ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ, ತಾಪಂ ಆಗಿದೆ.

ಫೆ.9ಕ್ಕೆ ಮತದಾನ, ಫೆ.11ಕ್ಕೆ ಮತ ಎಣಿಕೆ: ಚಿಕ್ಕಬಳ್ಳಾಪುರ ನಗರಸಭೆಯ ಒಟ್ಟು 31 ವಾರ್ಡ್‌ಗಳಿಗೆ ಫೆ.9 ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಮರು ಮತದಾನ ಇದ್ದಲ್ಲಿ ಮತದಾನ ಫೆ.10 ರಂದು ಬೆಳಗ್ಗೆ 7 ರಿಂದ 5 ಗಂಟೆವರೆಗೆ ನಡೆಯಲಿದ್ದು, ಮತ ಎಣಿಕೆಯ ಕಾರ್ಯ ಫೆ.11 ರಂದು ತಾಲೂಕು ಕೇಂದ್ರದಲ್ಲಿ ನಡೆಯಲಿದೆ.

ತಾಪಂ ಉಪ ಚುನಾವಣೆ – ಒಣ ದಿನಗಳ ಘೋಷಣೆ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಬೂರು ತಾಪಂ ಕ್ಷೇತ್ರ ಹಾಗೂ ಗೌರಿಬಿದನೂರು ತಾಲೂಕಿನ ಅಲಕಾಪುರ, ಶ್ಯಾಂಪುರ, ಗಂಗಸಂದ್ರ ತಾಪಂ ಕ್ಷೇತ್ರಗಳಿಗೆ ಫೆ.9 ರಂದು ಉಪ ಚುನಾವಣೆ ನಡೆಯುವ ಸಂಬಂಧ ಜ.25 ರಿಂದ ಫೆ.11 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.

ಸದರಿ ತಾಪಂ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ ಅಬಕಾರಿ ಸನ್ನದುಗಳನ್ನು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮಗಳು 1993 ರ ಪ್ರಕರಣ 308ಎಸಿ ಹಾಗೂ ಕರ್ನಾಟಕ ಅಬಕಾರಿ ಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 10(ಬಿ) ರ ಅನ್ವಯ ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆಂದು ಅಬಕಾರಿ ಉಪ ಆಯುಕ್ತ ಜಿ.ಪಿ. ನರೇಂದ್ರ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next