Advertisement

Chikkaballapur: ಲೋಕ ಸಮರ- 1,163 ಮತಗಟ್ಟೆಗಳಲ್ಲಿ ವೆಬ್‌ ಕ್ಯಾಸ್ಟಿಂಗ್‌

12:31 PM Apr 04, 2024 | Team Udayavani |

ಉದಯವಾಣಿ ಸಮಾಚಾರ
ಚಿಕ್ಕಬಳ್ಳಾಪುರ: ಒಂದಲ್ಲ. ಎರಡಲ್ಲ ಬರೋಬ್ಬರಿ 1,163 ಮತಗಟ್ಟೆಗಳಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಸಂಪೂರ್ಣ ನೇರ ಪ್ರಸಾರವಾಗಲಿದ್ದು, ಚುನಾವಣಾ  ಆಯೋಗದ ನಿರ್ದೇಶನದಂತೆ ಈ ಮತಗಟ್ಟೆಗಳಲ್ಲಿ ಮತದಾನ ಪ್ರಕ್ತಿಯೆ ಸಂಪೂರ್ಣ ವೆಬ್‌ ಕ್ಯಾಸ್ಟಿಂಗ್‌ ಆಗಲಿದೆ.

Advertisement

ಜಿಲ್ಲಾದ್ಯಂತ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಾಲೀಮು ನಡೆಸುತ್ತಿವೆ. ಮತ್ತೂಂದಡೆ ಮುಕ್ತ ಹಾಗೂ
ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಜಿಲ್ಲಾಡಳಿತ ಈ ಬಾರಿ ಲೋಕಸಭಾ ಚುನಾವಣೆಗೆ ಒಟ್ಟು ಮತಗಟ್ಟೆಗಳಲ್ಲಿ ಅರ್ಧದಷ್ಟು ಮತಗಟ್ಟೆಗಳಲ್ಲಿ ಮತದಾನ ನೇರ ಪ್ರಸಾರಕ್ಕೆ ಸಿದ್ಧತೆ ನಡೆಸಿದ್ದು ಅತ್ಯಾಧುನಿಕ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಮುಂದಾಗಿದೆ. ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಿಗೆ ಬರೋಬ್ಬರಿ 2,326 ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಮತದಾನ ನಡೆಸಲು ಕ್ಲಿಷ್ಟಕರವಾಗಿರುವ 382 ಸೇರಿದಂತೆ ಒಟ್ಟು ಮತಗಟ್ಟೆಗಳಲ್ಲಿನ ಶೇ.50 ಅಂದರೆ ಸುಮಾರು 1,163 ಮತಗಟ್ಟೆಗಳಲ್ಲಿ ಆಯೋಗದ ನಿರ್ದೇಶನದಂತೆ ವೆಬ್‌ ಕ್ಯಾಸ್ಟಿಂಗ್‌ಗೆ ಜಿಲ್ಲಾಡಳಿತ ಮುಂದಾಗಿದೆ. ಈ ಮೂಲಕ ಮತದಾನದ ವೇಳೆ ಯಾವುದೇ ರೀತಿಯ ಅಹಿತಕರ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಆಗದ ರೀತಿಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲು ಕ್ರಮ ವಹಿಸಲಾಗಿದೆ. ವಿಶೇಷವಾಗಿ ಮತದಾನದ ವೇಳೆ ಕ್ಷಣ ಕ್ಷಣ ಪರಿಸ್ಥಿತಿಯನ್ನು ಹಿರಿಯ ಅಧಿಕಾರಿಗಳು ಕೂತ
ಸ್ಥಳದಿಂದಲೇ ಅವಲೋಕಿಸಿ ನಿಗಾ ವಹಿಸಲಿದ್ದಾರೆ.

ಇಡೀ ಜಿಲ್ಲೆಯ ಚುನಾವಣಾ ಪ್ರಕ್ರಿಯೆಗಳನ್ನು ಒಂದು ಕಡೆ ವಿಡಿಯೋಗ್ರಾಫಿ ಮಾಡುತ್ತಿರುವ ಜಿಲ್ಲಾಡಳಿತ,ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿರುವ ಮತದಾನದ ವೇಳೆ ಜಿಲ್ಲೆಯಲ್ಲಿರುವ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಮೊದಲೇ ಗುರುತಿಸಿ ಅಲ್ಲಿನ ಮತದಾನದ ಪ್ರಕ್ರಿಯೆನ್ನು ಆರಂಭದಿಂದ ಹಿಡಿದು ಅಂತ್ಯದವರೆಗೂ ಸಂಪೂರ್ಣ ನೇರ ಪ್ರಸಾರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಬಿಸಿಲಿನ ತಾಪದಿಂದ ರಕ್ಷಣೆಗೆ ಶಾಮಿಯಾನ ವ್ಯವಸ್ಥೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಗಮಿಸುವ ಮತದಾರರ ರಕ್ಷಣೆಗೆ ಸೂಕ್ತ ನೆರಳಿನ ವ್ಯವಸ್ಥೆ ಕಲ್ಪಿಸಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಮತ ಕೇಂದ್ರಗಳಲ್ಲಿ ಉಂಟಾಗುವ ಸರದಿಗೆ ಅನುಗುಣವಾಗಿ ನೆರಳು ಕಲ್ಪಿಸಲು ಶಾಮಿಯಾನ ವ್ಯವಸ್ಥೆ ಮಾಡಲು ಯೋಚಿಸಿದೆ. ಮತದಾರರು ಬಿಸಿಲಿನಿಂದ ರಕ್ಷಣೆ ಹೊಂದಿ ಮತದಾನ ಮಾಡಬೇಕೆನ್ನುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ನೀರು ಸೇರಿದಂತೆ ಮೂಲಸೌಲಭ್ಯಕ್ಕೂ ಒತ್ತು ನೀಡಲಾಗಿದೆ.

Advertisement

ಚುನಾವಣಾ ಹಿಂಸೆಗೆ ಜಿಲ್ಲೆ ಖ್ಯಾತಿ
ಜಿಲ್ಲೆಯಲ್ಲಿ ಈ ಹಿಂದೆ ನಡೆದಿರುವ ಹಲವು ಚುನಾವಣೆಗಳ ಹಿನ್ನೋಟ ಗಮನಿಸಿದರೆ ಸಾಕಷ್ಟು ಚುನಾವಣಾ ಅಕ್ರಮಗಳಿಗೆ ಜಿಲ್ಲೆ
ಖ್ಯಾತಿಗೊಂಡಿದೆ. ಮತಪೆಟ್ಟಿಗೆಗಳಿಗೆ ಇಂಕ್‌ ಹಾಕುವುದು, ಮತ ಪೆಟ್ಟಿಗೆಗಳನ್ನು ಕದ್ದು ಹೋಗುವತಂಹ ಸಾಕಷ್ಟು ಪ್ರಕರಣಗಳು ಹಿಂದೆ ದಾಖಲಾಗಿವೆ. ಹಲವು ಬಾರಿ ಕೆಲ ಮತಗಟ್ಟೆಗಳಲ್ಲಿ ಅಕ್ರಮಗಳಿಂದಾಗಿ ಮರು ಮತದಾನ ಆಗಿರುವ ಉದಾಹರಣೆಗಳು ಇವೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಮತಗಟ್ಟೆಗಳ ಮೇಲೆ ನಿಗಾ ವಹಿಸಲು ಆಯೋಗ ಈ ಹಿಂದೆಗಿಂತಲೂ ಈ ಬಾರಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸುವುದರ ಜತೆಗೆ ಯಾವುದೇ ರೀತಿಯಲ್ಲಿ ಸಣ್ಣ ಲೋಪವೂ ಆಗದಂತೆ ಎಚ್ಚರಿಕೆ ವಹಿಸುತ್ತಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಒಟ್ಟು 2,326 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಆ ಪೈಕಿ ಶೇ.50 ರಷ್ಟು ಅಂದರೆ ಒಟ್ಟು ಮತಗಳಲ್ಲಿ ಅರ್ಧದಷ್ಟು 1,163 ಮತಗಟ್ಟೆಗಳಲ್ಲಿ ವೆಬ್‌ ಕ್ಯಾಸ್ಟಿಂಗ್‌ ಸೌಲಭ್ಯವನ್ನು ಚುನಾವಣಾ ಆಯೋಗದಿಂದ ನಿರ್ವಹಿಸಲಾಗುತ್ತದೆ. ಲೋಕಸಭಾ ಕ್ಷೇತ್ರದಲ್ಲಿ 42 ದುರ್ಬಲ ಹಾಗೂ 382 ಕ್ಲಿಷ್ಟಕರ ಮತಗಟ್ಟೆಗಳನ್ನು ಗುರುತಿಸಲಾಗಿದೆ.
●ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next