ಚಿಂತಾಮಣಿ (ಚಿಕ್ಕಬಳ್ಳಾಪುರ): ಸ್ಥಳೀಯ ಜೆಡಿಎಸ್ ನಗರಸಭಾ ಸದಸ್ಯ ಅಗ್ರಹಾರ ಮುರಳಿ ಅವರನ್ನು ದುಷ್ಕರ್ಮಿಗಳು ಕೊಲೆಗೆ ಯತ್ನಿಸಿರುವ ಘಟನೆ ಖಂಡಿಸಿ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಬಂದ್ ಆಚರಿಸಲಾಗುತ್ತಿದೆ.
ಬೆಳಗ್ಗೆಯಿಂದಲೇ ನಗರದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ನಗರದ ಅಂಗಡಿ ವರ್ತಕರು ಬಂದ್ ಗೆ ಬೆಂಬಲ ಸೂಚಿಸಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ವಿದ್ದಾರೆ.
ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಬಂದ್ ಪರಿಣಾಮ ವಾಹನ ಹಾಗೂ ಜನ ಸಂಚಾರವಿಲ್ಲದೇ ನಗರದ ರಸ್ತೆಗಳು ಬೀಕೋ ಎನ್ನುತ್ತಿವೆ.
ಕಳೆದ ಅ.13 ರಂದು ಶುಕ್ರವಾರ ಸಂಜೆ ನಗರದ ಗಜಾನನ ವೃತ್ತದಲ್ಲಿದ್ದ ಮುರಳಿ ಮೇಲೆ ಸುಪಾರಿ ಹಂತಕರು ಲಾಂಗ್ ಬೀಸಿ ಪರಾರಿ ಆಗಿದ್ದರು. ಘಟನೆಯಲ್ಲಿ ಮುರಳಿ ತಲೆ, ಕೈ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿತ್ತು.
ಘಟನೆ ಖಂಡಿಸಿ ನಗರದಲ್ಲಿ ದಲಿತ ಪರ, ಪ್ರಗತಿ ಪರ ಸಂಘಟನೆಗಳು ಬಂದ್ ಗೆ ಕರೆ ನೀಡಿರುವ ಭಾಗವಾಗಿ ಬೆಳಗ್ಗೆಯಿಂದಲೇ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಂತಿಯುತವಾಗಿ ಬಂದ್ ಆಚರಿಸಲಾಗುತ್ತಿದೆ.
ಜೆಡಿಎಸ್ ಸದಸ್ಯನ ಕೊಲೆ ಯತ್ನವನ್ನು ಮಾಜಿ ಸಿ.ಎಂ.ಹೆಚ್ಡಿ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದರು. ಸ್ಥಳೀಯ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಲ್ಲೆ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕು ಇದೆಯೆಂದು ಗಂಭೀರ ಆರೋಪ ಮಾಡಿದ್ದರು.
ಬಿಗಿ ಭದ್ರತೆ:
ಬಂದ್ ಆಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚಿಂತಾಮಣಿ ವಿಭಾಗದ ಆರಕ್ಷಕ ಉಪಾಧೀಕ್ಷಕ ಮುರಳೀಧರ್ ನೇತೃತ್ವದಲ್ಲಿ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 150 ಕ್ಕೂ ಹೆಚ್ಚು ಪೊಲೀಸರನ್ನು ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.