ಚಿಕ್ಕಬಳ್ಳಾಪುರ: ಖಾಸಗಿ ಕಂಪನಿಗೆ ಸೇರಿದ ಕೋಳಿಗಳನ್ನು ಮಾರಾಟ ಮಾಡಿದ ಹಣ ತೆಗೆದುಕೊಂಡು ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ನಮ್ಮನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ದೋಚಿ ಪರಾರಿಯಾದರೆಂದು ಹೇಳಿ ಪೊಲೀಸರಿಗೆ ದೂರು ಕೊಟ್ಟಿದ್ದ ಖಾಸಗಿ ಕಂಪನಿ ಸೂಪರ್ ವೈಸರ್ ಒಬ್ಬ ತನಿಖೆ ವೇಳೆ ತಾನೇ ಆರೋಪಿಯಾಗಿ ಸಿಕ್ಕಿ ಬಿದ್ದಿರುವ ಪ್ರಸಂಗ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಏನಿದು ಘಟನೆ?
ಕಳೆದ ಜುಲೈ 21ರಂದು ದೇವನಹಳ್ಳಿ ಮೂಲದ ಲೋಟಸ್ ಫಾರ್ಮ್ ಕಂಪನಿಯ ಲೈನ್ ಸೂಪರ್ ವೈಸರ್ ಉದಯಕುಮಾರ್ ಎಂಬುವರು ತಮ್ಮ ಸಹೋದ್ಯೋಗಿ ಮಂಜುನಾಥ ಜೊತೆ ಸೇರಿ ಚಿಕ್ಕಬಳ್ಳಾಪುರ ತಾಲೂಕಿನ ಆನೆಮಡಗು ಕೊತ್ತೂರರು ರಸ್ತೆಯ ಹರೀಶ್ ಎಂಬುವರ ಕೋಳಿ ಫಾರಂ ಹೋಗಿ ಕಂಪನಿಯ ಒಪ್ಪಂದದಂತೆ ಸಾಕಾಣೆಕೆ ಮಾಡಲಾಗಿದ್ದ ಕೋಳಿಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಿ ಸಂಗ್ರಹವಾಗಿದ್ದ ಬರೋಬರಿ 7.91 ಲಕ್ಷ. ರೂ ಹಣವನ್ನು ತೆಗೆದುಕೊಂಡ ಬರುವ ವೇಳೆ ನಾಲ್ವರು ಅಪರಿಚಿತರು ಬೈಕ್ ನ್ನು ಅಡ್ಡಗಟ್ಟಿ ಚಾಕು ತೋರಿಸಿ ಮದ್ಯದ ಬಾಟಲುಗಳಿಂದ ನಮ್ಮ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರೆಂದು ಉದಯಕುಮಾರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ವೇಳೆ ದೂರುದಾರನೇ ಆರೋಪಿ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲಿಸರು ಪ್ರಕರಣವನ್ನು ಚಿಕ್ಕಬಳ್ಳಾಪುರ ಆರಕ್ಷಕ ಉಪ ಅಧೀಕ್ಷಕ ರವಿಶಂಕರ್, ಸಿಪಿಐ ಪ್ರಶಾಂತ್, ಪಿಎಸ್ಐ ಚೇತನ್ ಕಯಮಾರ್ ಹಾಗೂ ಸಿಬ್ಬಂದಿ ವೈಜ್ಞಾನಿಕವಾಗಿ ತನಿಖೆ ನಡೆಸಿ ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿಯ ಪ್ರಶಾಂತ್, ನರಸಿಂಹ ಮೂರ್ತಿ, ಪೃಥ್ವಿರಾಜ್, ಕಿರಣ್, ನವೀನ್ ಕುಮಾರ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ಕೃತ್ಯಕ್ಕೆ ಉದಯಕುಮಾರ್ ಪ್ರೇರಣೆ
ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಾವು ಡಕಾಯಿತಿ ನಡೆಸಲು ಉದಯಕುಮಾರ್ ಸಹಕಾರ ಇತ್ತು. ಮೊದಲಿಗೆ ಆತ ಸಂಚು ರೂಪಿಸಿ ನಾವು ಲೋಟಸ್ ಕಂಪನಿಗೆ ಸೇರಿದ ಕೋಳಿಗಳನ್ನು ಮಾರಾಟ ಮಾಡಿ ಹಣ ತರುವ ವೇಳೆ ನೀವು ನಮ್ಮನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಲ್ಲೆ ಮಾಡಿದಂತೆ ನಾಟಕವಾಡಿ ಹಣ ಸುಲಿಗೆ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ನಮಗೆ ಮೊದಲೇ ತಿಳಿಸಿದಂತೆ ನಾವು ಮಾಡಿದ್ದೇವೆಂದು ಪೊಲೀಸರ ವಿಚಾರಣೆ ವೇಳೆ ಬಂಧಿತರು ಬಾಯಿ ಬಿಡುವ ಮೂಲಕ ಡಕಾಯಿತಿ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಇಡೀ ಪ್ರಕರಣಕ್ಕೆ ಪೊಲೀಸರಿಗೆ ದೂರು ನೀಡಿದ್ದ ಅಸಾಮಿ ಉದಯಕುಮಾರ್ ನೇ ಸೂತ್ರದಾರ ಎನ್ನುವುದು ಈಗ ಬೆಳಕಿಗೆ ಬಂದಿದೆ.
ಇನ್ನೋವಾ ಕಾರು ಜಪ್ತಿ
ಆರೋಪಿಗಳಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ಇನ್ನೋವಾ ಕಾರು, ಪಲ್ಸರ್ ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ ಗಳ ಸಹಿತ ಆರೋಪಿಗಳಿಂದ 7.60 ಲಕ್ಷ ರೂ, ನಗದು ವಶಪಡಿಸಿಕೊಳ್ಳಾಗಿದೆಯೆಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.