ಚಿಕ್ಕಬಳ್ಳಾಪುರ: ಜಿಲ್ಲೆಗೆ ಕೋವಿಡ್-19 ಪ್ರವೇಶವಾದ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಬರೋಬ್ಬರಿ 77 ಪಾಸಿಟಿವ್ ಪ್ರಕರಣಗಳು ಜಿಲ್ಲಾದ್ಯಂತ ಗುರುವಾರ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 577ಕ್ಕೆ ಮುಟ್ಟಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ಕೋವಿಡ್ ಸೋಂಕಿಗೆ ಒಬ್ಬರು ಬಲಿಯಾಗಿದ್ದು ಸಾವಿನ ಸಂಖ್ಯೆ 17ಕ್ಕೆ ಏರಿಕೆ ಕಂಡಿದೆ.
77 ಹೊಸ ಪ್ರಕರಣಗಳ ಪೈಕಿ ಜಿಲ್ಲೆಯಲ್ಲಿ ಅತ್ಯಧಿಕವಾಗಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 28, ಗೌರಿಬಿದನೂರು 17, ಚಿಂತಾಮಣಿ 19, ಬಾಗೇಪಲ್ಲಿ 8, ಶಿಡ್ಲಘಟ್ಟ 3 ಹಾಗೂ ಗುಡಿಬಂಡೆ ತಾಲೂಕಿನಲ್ಲಿ 2 ಪಾಸಿಟಿವ್ ಪ್ರಕರಣಗಳು ಕಂಡು ಬರುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ -19 ತನ್ನ ಆರ್ಭಟವನ್ನು ಮುಂದು ವರಿಸಿದೆ. 77 ಪ್ರಕರಣಗಳಲ್ಲಿ 58 ಪುರುಷರು ಹಾಗೂ 19 ಮಂದಿ ಮಹಿಳೆಯರು ಆಗಿದ್ದಾರೆ.
ನಾಲ್ಕೈದು ದಿನದಲ್ಲಿ 300 ಪ್ರಕರಣ: ಕೇವಲ ನಾಲ್ಕೈದು ದಿನದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 300 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ಇದುವರೆಗೂ ನಗರ, ಪಟ್ಟಣಕ್ಕೆ ಸೀಮಿತವಾಗಿದ್ದ ಕೋವಿಡ್ ಈಗ ಹಳ್ಳಿಗಳಿಗೂ ವಿಸ್ತರಿಸಿ ಜನರ ನಿದ್ದೆಗೆಡಿಸಿದೆ. ಕಳೆದ ವಾರದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮಾತ್ರ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
294 ಮಂದಿ ಡಿಸಾcರ್ಜ್: ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಒಟ್ಟು 577 ಪಾಸಿಟಿವ್ ಪ್ರಕರಣಗಳ ಪೈಕಿ ಇದುವರೆಗೂ 294 ಮಂದಿ ರೋಗದಿಂದ ಚೇತರಿಕೆ ಕಂಡು ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಇನ್ನೂ 265 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಆಸ್ಪತ್ರೆ ಅಲ್ಲದೇ ತಾಲೂಕು ಕೇಂದ್ರಗಳಲ್ಲಿ ಸಹ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.