ಚಿಕ್ಕಬಳ್ಳಾಪುರ: ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಬಡ ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸುವ ದಿಸೆಯಲ್ಲಿ ಪ್ರತಿ ವರ್ಷ ಆರ್‌ಟಿಇ ಮುಖಾಂತರ ಭರ್ತಿ ಮಾಡುವ ಸೀಟುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿತಗೊಳ್ಳುತ್ತಿದ್ದು, ಈ ವರ್ಷ ಜಿಲ್ಲೆಗೆ 44 ಶಾಲೆಗಳಲ್ಲಿ ಕೇವಲ 169 ಸೀಟು ಭರ್ತಿಗೆ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಕೋವಿಡ್ 19 ಲಾಕ್‌ಡೌನ್ ಪರಿಣಾಮ ಈ ವರ್ಷ ಯಾವ ತಿಂಗಳಿಗೆ ಶೈಕ್ಷಣಿಕ ವರ್ಷ ಆರಂಭಿಸಬೇಕೆಂದು ಶಿಕ್ಷಣ ಇಲಾಖೆ ಗೊಂದಲ ದಲ್ಲಿರುವಾಗಲೇ ಆರ್‌ಟಿಇ ಸೀಟು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆ ತಿದ್ದು, ಕಳೆದ ಬುಧವಾರದಿಂದಲೇ ಪೋಷಕರು ಆರ್‌ಟಿಇ ಸೀಟು ಸಿಗುವ ಮಹತ್ವಕಾಂಕ್ಷೆ ಹೊತ್ತು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
4
2 ಸೀಟು ಕಡಿತ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಬರೋಬ್ಬರಿ 42 ಆರ್ ಟಿಇ ಸೀಟುಗಳು ಕಡಿತವಾಗಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 211 ಆರ್‌ಟಿಇ ಸೀಟುಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದ ಶಿಕ್ಷಣ ಇಲಾಖೆ ಈ ವರ್ಷ ಒಟ್ಟು 169 ಸೀಟುಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು ಜಿಲ್ಲೆಯ ಒಟ್ಟು 44 ಖಾಸಗಿ ಶಾಲೆಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.
ಭಾರೀ ಸಂಖ್ಯೆಯಲ್ಲಿ ಕಡಿತ: ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಆರ್‌ಟಿಇ ಮಾರ್ಗಸೂಚಿಗಳಿಗೆ ಸರ್ಜರಿ ಮಾಡಿ ಸರ್ಕಾರಿ ಶಾಲೆಗಳನ್ನು ಉಳಿಸುವ ದಿಸೆಯಲ್ಲಿ ಆರ್‌ಟಿಇ ಸೀಟುಗಳ ಸಂಖ್ಯೆ ಲಕ್ಷಾಂತರ ಸಂಖ್ಯೆಯಲ್ಲಿ ಕಡಿತಗೊಳಿಸಿದ ಪರಿಣಾಮ ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆರ್‌ಟಿಇ ಸೀಟು ಭಾರೀ ಪ್ರಮಾಣದಲ್ಲಿ ಕುಸಿದಿದೆ. 2018-19 ರಲ್ಲಿ ಜಿಲ್ಲೆಗೆ ಒಟ್ಟು 2,750 ಸೀಟುಗಳು ಆರ್‌ಟಿಇನಡಿ ಲಭ್ಯವಾಗಿದ್ದವು. 2019-20ನೇ ಸಾಲಿನಲ್ಲಿ 211 ಸೀಟುಗಳು ಮಾತ್ರ ಹಂಚಿಕೆ ಆಗಿದ್ದವು. ಈ ವರ್ಷ ಬರೀ 169 ಸೀಟುಗಳು ನಿಗದಿಯಾಗಿವೆ.
ಪೋಷಕರಲ್ಲಿ ನಿರಾಶೆ: ವರ್ಷದಿಂದ ವರ್ಷಕ್ಕೆ ಸರ್ಕಾರ ಆರ್‌ಟಿಇ ಸೀಟುಗಳ ಸಂಖ್ಯೆ ಕಡಿಮೆಗೊಳಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಿರುವುದು ಒಂದೆಡೆ ಸಮಾಧಾನ ತಂದರೂ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಆರ್‌ಟಿಇ ಮೂಲಕ ಓದಿಸಬೇಕೆಂಬ ಹಂಬಲ ಹೊಂದಿದ್ದ ಬಡ ವಿದ್ಯಾರ್ಥಿಗಳ ಪೋಷಕರಲ್ಲಿ ಸಹಜವಾಗಿಯೇ ಸೀಟು ಕಡಿತ ತೀವ್ರ ನಿರಾಶೆ ಮೂಡಿಸಿದೆ.
ಜಿಲ್ಲೆಗೆ ಈ ವರ್ಷ ಆರ್‌ಟಿಇನಡಿ ಒಟ್ಟು 44 ಶಾಲೆಗಳಲ್ಲಿ 169 ಸೀಟುಗಳ ಭರ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ. ಇಲಾಖೆ ಮಾರ್ಗಸೂಚಿಯಂತೆ ಸೀಟು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅರ್ಜಿ ಸಲ್ಲಿಕೆ ಕಾರ್ಯ ಈಗಾಗಲೇ ಶುರುವಾಗಿದೆ. ಜೂನ್ 22ರ ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
-ಎಸ್.ಜಿ.ನಾಗೇಶ್, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
* ಕಾಗತಿ ನಾಗರಾಜಪ್ಪ