Advertisement

ಘಮ್ಮೆನ್ನುವ ಚಿಕ್ಕಬಳ್ಳಾಪುರದ ದೋಸೆ

02:17 PM Oct 09, 2017 | |

ಬೆಂಗಳೂರು-ಹೈದರಾಬಾದ್‌ ನಡುವಿನ ರಾಷ್ಟ್ರೀಯ ಹೆದ್ದಾರಿ-7ಕ್ಕೆ ಅಂಟಿಕೊಂಡಿರುವ ಚಿಕ್ಕಬಳ್ಳಾಪುರದ ಬಿ.ಬಿ ರಸ್ತೆಗೆ ಹೊಂದಿಕೊಂಡಂತೆ ಪುಟ್ಟುರಾವ್‌ ಹೋಟೆಲ್‌ ಇದೆ. ಇಲ್ಲಿ ದೊರೆಯುವ ಬಿಸಿಬಿಸಿ ತುಪ್ಪದ ಮಸಾಲೆ ದೋಸೆ ಹಾಗೂ ಚಿತ್ರಾನ್ನ ಕಾಂಬಿನೇಷನ್‌ಗೆ ಎಂಥವರ ನಾಲಿಗೇನೂ ಚಡಪಡಿಸುತ್ತದೆ. 

Advertisement

ಇಡ್ಲಿ ವಡೆ, ಸಾಂಬಾರ್‌, ಉಪ್ಪಿಟ್ಟು, ಕೇಸರಿಬಾತ್‌ ಕಾಂಬಿನೇಷನ್‌ನ ನೀವು ನೋಡಿದ್ದೀರಿ. ತಿಂದಿದ್ದೀರಿ. ಆದರೆ ಚಿತ್ರಾನ್ನ-ಮಸಾಲೆ ದೋಸೆಯ ಕಾಂಬಿನೇಷನ್‌ ಖಂಡಿತ ವಿರಳ. ಅದು ಈ ಹೋಟೆಲಿನಲ್ಲಿದೆ. ಮಹಾನಗರದ ಐಷಾರಾಮಿ ಹೋಟೆಲ್‌ಗ‌ಳನ್ನು ನಾಚಿಸುವ ರೀತಿಯಲ್ಲಿ ಇಲ್ಲಿ ಘಮಿಘಮಿಸುವ ತುಪ್ಪದ ಖಾಲಿ ದೋಸೆ ಹಾಗೂ ಮಸಾಲೆ ದೋಸೆಗೆ ಸಾಥ್‌ ನೀಡುವ ನಿಂಬೆಹುಳಿಯ
ರುಚಿಕರವಾದ ಚಿತ್ರಾನ್ನದ ಸುವಾಸನೆ ಹೋಟೆಲ್‌ ಪ್ರವೇಶಿಸುತ್ತಿದ್ದಂತೆ ಮೂಗಿಗೆ ಬಡಿಯುತ್ತದೆ.

ನೆರೆಯ ಆಂಧ್ರಪ್ರದೇಶದ ಮಂತ್ರಾಲಯ, ಪುಟ್ಟಪರ್ತಿ, ಕದ್ರಿ, ಐತಿಹಾಸಿಕ ನಂದಿಗಿರಿಧಾಮದ ವೀಕ್ಷಣೆಗೆ ಬರುವ ಪ್ರವಾಸಿಗರು; ಅಷ್ಟೇ ಏಕೆ, ಬೆಂಗಳೂರು ಮಹಾನಗರದ ಜನತೆ ಚಿಕ್ಕಬಳ್ಳಾಪುರಕ್ಕೆ ಬಂದರೆ ಈ ಹೋಟೆಲ್‌ಗೆ ಭೇಟಿ ಕೊಡದೇ ಹೋಗುವುದಿಲ್ಲ. ಹೋಟೆಲ್‌ ಉದ್ಯಮ ನಡೆಸುವುದು ದುಬಾರಿ ಎನ್ನುವ ಈ ದಿನಗಳಲ್ಲಿ ಪುಟ್ಟುರಾವ್‌ ಹೋಟೆಲ್‌ಗೆ 60 ಸಂವತ್ಸರಗಳು ಪೂರ್ತಿಯಾಗಿವೆ. 60 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ವೆಂಕಟರಾಮ್‌, ಪುಟ್ಟರಾವ್‌ ಎಂಬ ಅಣ್ಣ ತಮ್ಮಂದಿರು ಸೇರಿ ಈ ಹೋಟೆಲ್‌ ಆರಂಭಿಸಿದರು. ಮೊದಲಿಗೆ ಇದಕ್ಕೆ ವೆಂಕಟೇಶ್ವರ ಹೋಟೆಲ್‌ ಅನ್ನೋ ಹೆಸರಿತ್ತು. ಈಗ ನಗರದ ಸಂತೆ ಮಾರುಕಟ್ಟೆ ಸಮೀಪ ಅಭಿಷೇಕ್‌
ಹೆಸರಿನಲ್ಲಿ ವೆಂಕಟರಾಮ್‌ ಹಾಗೂ ಅವರ ಮಗ ಸೀತಾರಾಮ್‌ ಹೋಟೆಲ್‌ ನಡೆಸುತ್ತಿದ್ದಾರೆ. 

ಈ ಹೋಟೆಲ್‌ನ ವಿಶೇಷ ಅಂದರೆ ರುಚಿ ಹಾಗೂ ಶುಚಿತ್ವದ ತತ್ವ. ದೋಸೆಗೆ ಇವರು ಅಕ್ಕಿಯಿಂದ ಸಿದ್ದಪಡಿಸುವ ಹಿಟ್ಟನ್ನು ಹದಗೊಳಿಸುವ ಪರಿ ವಿಭಿನ್ನವಾಗಿರುತ್ತದೆ. ದೋಸೆಗೆ ಸಾಥ್‌ ನೀಡುವ ಚೆಟ್ನಿ ತಯಾರಿಗೆ ಚಿಕ್ಕಬಳ್ಳಾಪುರದ್ದೇ ಮೆಣಸಿನಕಾಯಿ
ಬಳಕೆಯಾಗುತ್ತದೆ. ಈ ಹೋಟೆಲಿನಲ್ಲಿ ಬೆಳಗ್ಗೆಯಿಂದ ಸಂಜೆತನಕ ದೋಸೆ ಸಿಗುತ್ತದೆ.  

ಚಿತ್ರರಂಗದ ನಂಟು
ನಟರಾದ ದೊಡ್ಡಣ್ಣ, ಶ್ರೀನಿವಾಸಮೂರ್ತಿ ಮತ್ತಿತರ ನಟರು ನಂದಿ ಗಿರಿಧಾಮದಲ್ಲಿ ಚಿತ್ರೀಕರಣಕ್ಕೆ ಆಗಮಿಸಿದರೆ ಖಾಯಂ ಆಗಿ ಬೆಳಗಿನ ಉಪಹಾರಕ್ಕೆ ಪುಟ್ಟುರಾವ್‌ ಹೋಟೆಲ್‌ಗೆ ತಪ್ಪದೇ ಬರುತ್ತಿದ್ದರು. ಅವಳಿ ಜಿಲ್ಲೆಯ ಬಹುತೇಕ ಶಾಸಕರು, ಮಾಜಿ ಶಾಸಕರು,
ರಾಜಕೀಯ ಪಕ್ಷಗಳ ಧುರೀಣರು, ಅಧಿಕಾರಿಗಳು ಇಲ್ಲಿನ ತುಪ್ಪದ ಖಾಲಿ ಹಾಗೂ ಮಸಾಲೆ ದೋಸೆ ಮತ್ತು ಚಿತ್ರಾನ್ನದ ಕಾಂಬಿನೇಷನ್‌ನ ರುಚಿ ಕಂಡವರು. ಹೋಟೆಲ್‌ನ ಮತ್ತೂಂದು ವಿಶೇಷ ಕೈಗೆಟುಕುವ ದರದಲ್ಲಿ ತುಪ್ಪದ ದೋಸೆ, ಚಿತ್ರಾನ್ನ ಸಿಗುತ್ತದೆ. 18 ರೂ,ಗೆ ಖಾಲಿ ದೊಸೆ, 15 ರೂ,ಗೆ ಚಿತ್ರಾನ್ನ, 40 ರೂ,ಗೆ ತುಪ್ಪದ ಮಸಾಲೆ ದೋಸೆ ದೊರೆಯುತ್ತದೆ. 

Advertisement

ಯಶಸ್ಸಿನ ಗುಟ್ಟು
ಹೋಟೆಲ್‌ ಇಷ್ಟರಮಟ್ಟಿಗೆ ಖ್ಯಾತಿಯಾಗಲು ಏನು ಕಾರಣ ಅಂತ ಸೀತಾರಾಮ್‌ ರನ್ನು ಕೇಳಿದರೆ ಅವರು ಹೇಳಿದ್ದು ಹೀಗೆ: ಹೋಟೆಲ್‌
ಆರಂಭಗೊಂಡಾಗಿನಿಂದಲೂ ನಾಲ್ಕೈದು ಮಂದಿ ಕಾರ್ಮಿಕರು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಅಡುಗೆ ಭಟ್ಟರು ಇದ್ದಾರೆ.
ಅವರ ಪರಿಶ್ರಮದಿಂದ ಹೋಟೆಲ್‌ ಈ ಸ್ಥಿತಿಗೆ ಬಂದಿದೆ. ನಾವೂ ಅಷ್ಟೇ, ನಮ್ಮ ಕಾರ್ಮಿಕರನ್ನು ಸಂತೃಪ್ತಿಯಿಂದ ನೋಡಿಕೊಳ್ಳುತ್ತೇವೆ.
ಅವರಿಗೆ ಏನನ್ನೂ ಕಡಿಮೆ ಮಾಡುವುದಿಲ್ಲ. ಅವರು ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ ಎನ್ನುತ್ತಾರೆ. 

ಕಾಗತಿ ನಾಗರಾಜಪ್ಪ, ಚಿಕ್ಕಬಳ್ಳಾಪುರ.

Advertisement

Udayavani is now on Telegram. Click here to join our channel and stay updated with the latest news.

Next