ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ದಿನೇ ದಿನೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ವಾರ್ಡ್‌ಗಳಿಗೆ ನೀರು ಪೂರೈಸುವ ಜವಾಬ್ದಾರಿ ಹೊತ್ತಿರುವ ಪುರಸಭೆ ನೀರು ಪೂರೈಸಲು ವಿಫಲವಾಗಿದೆ. ಹೀಗಾಗಿ ಸಾರ್ವಜನಿಕರು ವಾರ್ಡ್‌ಗಳಲ್ಲಿ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಪುರಸಭೆಯ 23 ವಾರ್ಡ್‌ಗಳ ಪೈಕಿ ಬಹುತೇಕ ವಾರ್ಡ್‌ಗಳಲ್ಲಿ ಪುರಸಭೆ ನಲ್ಲಿಗಳಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ಹನಿ ನೀರಿಗಾಗಿ ಸಾರ್ವಜನಿಕರು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಸುಮಾರು 21 ಸಾವಿರ ಜನಸಂಖ್ಯೆ ಇದ್ದು, 17 ಕೊಳವೆ ಬಾವಿಗಳಲ್ಲಿ ಮಾತ್ರ ಕಡಿಮೆ ಪ್ರಮಾಣದಲ್ಲಿ ನೀರಿದೆ. ಇವುಗಳ ಪೈಕಿ ಕೆಲ ಕೊಳವೆ ಬಾವಿಗಳಲ್ಲಿ ಕೆಲ ಗಂಟೆಗಳ ಕಾಲ ಮಾತ್ರ ನೀರು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ನೀರು ಕಲ್ಪಿಸಲು ಪುರಸಭೆ ವಿಫಲವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಹಣ ನೀಡಿ ನೀರು ಪೂರೈಕೆ: ಪಟ್ಟಣದ ಮಾರುತಿ ನಗರ, ಮಹಾಲಕ್ಷ್ಮೀ ಬಡಾವಣೆ, ಕೇದಿಗೆಹಳ್ಳಿ, ದೆಬ್ಬೆಗಟ್ಟ ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ನೀರನ ಅಭಾವ ಸೃಷ್ಟಿಯಾಗಿದೆ. ಪುರಸಭೆ ನಲ್ಲಿಗಳಲ್ಲಿ ಬರುತ್ತಿದ್ದ ನೀರು ಸಹ ನಿಂತು ಹೋಗಿದೆ. ಇಲ್ಲಿನ ನಿವಾಸಿಗಳು ಹಣ ನೀಡಿ ಟ್ಯಾಂಕರ್‌ಗಳಿಂದ ನೀರನ್ನು ಖರೀದಿಸುತ್ತಿದ್ದಾರೆ. ಪುರಸಭೆ ಅಧಿಕಾರಿಗಳಿಗೆ ನೀರಿನ ಸಮಸ್ಯೆಯ ಬಗ್ಗೆ ತಿಳಿಸಿದರು ಯಾವ ಪ್ರಯೋ ಜನವಾಗುತ್ತಿಲ್ಲ.
ನೀರು ಸರಬರಾಜಿಗೆ ಟೆಂಡರ್: ಚಿಕ್ಕನಾಯಕನ ಹಳ್ಳಿ ಪಟ್ಟಣದ ವಾರ್ಡ್‌ಗಳಿಗೆ ನೀರು ಸರಬ ರಾಜು ಮಾಡಲು ಟ್ಯಾಂಕರ್‌ಗಳಿಗೆ ಟೆಂಡರ್ ಮಾಡಿ, ಇಎಂಡಿ ಪಡೆದಿರುವ ಪುರಸಭೆ, ಟೆಂಡರ್ ಆಗಿ ಒಂದು ವಾರ ಕಳೆದಿದೆ. ಆದರೂ ಸಹ ಸಾರ್ವಜನಿಕರಿಗೆ ಯಾವ ರೀತಿಯ ಅನುಕೂಲವಾಗಿಲ್ಲ. ನೀರಿನ ಸಮಸ್ಯೆ ಪಟ್ಟಣದಲ್ಲಿ ಮುಗಿಲು ಮುಟ್ಟಿದೆ.
ಅಧಿಕಾರಿಗಳು ಟೆಂಡರ್ ಕರೆದು ಒಂದು ವಾರವಾಗಿದ್ದರೂ ಸಹ ಕುಡಿಯುವ ನೀರನ್ನು ವಾರ್ಡ್‌ಗಳಿಗೆ ನೀಡದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
● ಚೇತನ್ ಪ್ರಸಾದ್