Advertisement

ಕೆಲಸ ಮಾಡುವ ಅಭ್ಯರ್ಥಿಗೆ ಮತ ನೀಡಿ: ಪ್ರಜ್ವಲ್‌

04:51 PM Apr 10, 2019 | Naveen |

ಕಡೂರು: ದುಡಿಯುವ ಎತ್ತಿಗೆ ಹುಲ್ಲು ಹಾಕು ಎಂಬ ನಾಣ್ಣುಡಿಯಂತೆ ಕೆಲಸ ಮಾಡುವ, ಹೋರಾಟದ ಛಲವುಳ್ಳ ತಮಗೆ ಮತನೀಡಿ ಗೆಲ್ಲಿಸಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್‌
ರೇವಣ್ಣ ಹೇಳಿದರು.

Advertisement

ತಾಲೂಕಿನ ಜಿಗಣೇಹಳ್ಳಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನಿಮ್ಮ ಒಂದೊಂದು ಮತವೂ ಹುಲ್ಲಿನ ರೂಪದಲ್ಲಿ ಲಭಿಸಿದರೆ ಅದು ಬಹುದೊಡ್ಡ ಶಕ್ತಿಯಾಗಿ ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಮೊಳಗುತ್ತದೆ ಎಂದರು.

ತಮ್ಮ 8 ವರ್ಷದ ರಾಜಕೀಯ ಜೀವನದಲ್ಲಿ ಹೋರಾಟವನ್ನೇ ರೂಢಿಸಿಕೊಂಡು ಬಂದಿದ್ದೇನೆ. ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶ್ರಮ ಹಾಕಿದ್ದೇನೆ. ರಣಗಟ್ಟ ಯೋಜನೆಯ ಜಾರಿಗೆ ಹೋರಾಟ ಮಾಡಿ ಕೆರೆಗಳನ್ನು ತುಂಬಿಸುವ ಸಂಕಲ್ಪ ಮಾಡಿದ್ದೇನೆ. ಬಜೆಟ್‌ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದಕ್ಕಾಗಿ 100 ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದರು.

ಕಡೂರು ಅತೀ ಹಿಂದುಳಿದ ಮತ್ತು ಶಾಶ್ವತ ಬರಪೀಡಿತ ತಾಲೂಕು ಎಂದು ಅರಿವಿದೆ. ಇಲ್ಲಿಯ ಜನ ನೀರಾವರಿ ಮತ್ತು ಅಭಿವೃದ್ಧಿ ಬಯಸುತ್ತಿದ್ದಾರೆ. ತಮ್ಮ ತಂದೆ ಸಚಿವ ರೇವಣ್ಣ ಈಗಾಗಲೇ 89 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಕ್ಷೇತ್ರದ ನೀರಾವರಿ ಯೋಜನೆಗಳ ಜಾರಿಗೆ ನಿಮ್ಮ ಶಕ್ತಿಯಾಗಿ ನಿಂತುಕೊಳ್ಳುತ್ತೇನೆ ಎಂದು ಹೇಳಿದರು.

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ತೆಲುಗುಗೌಡ ಸಮಾಜದ ಏಳ್ಗೆಗೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕಡೂರು ಬೀರೂರು ಭಾಗದ ಹಲವು ರಾಜಕಾರಣಿಗಳು ದುಡಿದಿದ್ದಾರೆ. ರಾಜಕೀಯ ಮೀಸಲಾತಿ ಈ ಸಮಾಜಕ್ಕೆ ಅಗತ್ಯವಿದೆ ಎಂಬ ಅರಿವಿದ್ದು ಬರುವ ದಿನಗಳಲ್ಲಿ ಅದನ್ನೂ ತಮ್ಮ ಹೋರಾಟದ ಭಾಗವಾಗಿ ಅಳವಡಿಸಿಕೊಳ್ಳಲಾಗುವುದು ಎಂದು
ಭರವಸೆ ನೀಡಿದರು.

Advertisement

ದೇವೇಗೌಡರು ಮತ್ತು ಸಿದ್ದರಾಮಯ್ಯ ಗುರುಶಿಷ್ಯ
ಪರಂಪರೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಶಕ್ತಿಯಾಗಿ ಬೆಳೆದಿದ್ದಾರೆ. ಅವರ ಬಳಿ ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಬನ್ನಿ ಎಂದು ಕೋರಿದಾಗ ನಿನ್ನ ಕ್ಷೇತ್ರದ ಎಲ್ಲಾ ವಿಧಾನಸಭೆ
ಕ್ಷೇತ್ರಗಳಲ್ಲಿ ನಾವಿಬ್ಬರೂ ಜಂಟಿಯಾಗಿ ಪ್ರಚಾರ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆ ನಿಮಿತ್ತ ಏಪ್ರಿಲ್‌ 11ರಂದು ಇದಕ್ಕಾಗಿ ದಿನಾಂಕವನ್ನೂ ನಿಗಪಡಿಸಿರುವುದು ತಮಗೆ ಬಲ
ತಂದಿದೆ ಎಂದರು.

ತಮ್ಮ ವಿರೋಧಪಕ್ಷದ ಅಭ್ಯರ್ಥಿ ಮೋದಿ ಹೆಸರು ಹೇಳಿ ಮತಯಾಚಿಸುತ್ತಿದ್ದಾರೆ. ನಿಮ್ಮ ಸಮಸ್ಯೆಯನ್ನು ಮೋದಿ ಅವರು ಬಂದು ಇಲ್ಲಿ ಬಗೆಹರಿಸುತ್ತಾರಾ ಎಂದು ಒಮ್ಮೆ ಪ್ರಶ್ನೆ ಮಾಡಿಕೊಳ್ಳಿ. ಕೇವಲ ಟೀಕೆಗಾಗಿ ಬಿಜೆಪಿ ರಾಜಕಾರಣ
ಮಾಡುತ್ತಿದ್ದರೆ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.

ಮಾಜಿ ಶಾಸಕ ವೈ.ಎಸ್‌.ವಿ ದತ್ತ ಮಾತನಾಡಿ, ಕಡೂರು ತಾಲೂಕಿಗೆ ನೀರಾವರಿ ಯೋಜನೆಗಳಾದ ಹೆಬ್ಬೆ, ಗೊಂದಿ ಅಣೆಕಟ್ಟು ಮುಂತಾದ ಯೋಜನೆಗಳಿಗೆ ಸಾವಿರ ಕೋಟಿಯೇ ಬೇಕು. ಆದರೆ ಇದನ್ನೆಲ್ಲಾ ಹೋರಾಟ ಮಾಡಿ ಜಾರಿಗೆ ತರುವ
ಬದ್ಧತೆ ದೇವೇಗೌಡರ ಕುಟುಂಬಕ್ಕೆ ಮಾತ್ರ ಎಂದು ಹೇಳಿದರು.

ವಿಧಾನಪರಿಷತ್‌ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಮಾತನಾಡಿದರು. ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಕೆಪಿಸಿಸಿ ಸದಸ್ಯ ಕೆ.ಎಸ್‌. ಆನಂದ್‌, ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ವಿಧಾನಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಸದಸ್ಯೆ ಲೋಲಾಕ್ಷಿಬಾಯಿ,
ತಾಪಂ ಉಪಾಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ಲೋಕೇಶ್‌, ಬಿದರೆ ಜಗದೀಶ್‌, ಕೆ.ಎಂ. ವಿನಮಾಯಕ್‌, ಎಂ.ಎಚ್‌. ಚಂದ್ರಪ್ಪ, ಬಾಸೂರು ಚಂದ್ರಮೌಳಿ, ಹಾಸನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್‌ ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next