ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ಪ್ರಭಾವದಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮತ್ತೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ 85,242 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡು, ಅದರಲ್ಲಿ 51,809 ವಿದ್ಯಾರ್ಥಿಗಳು ಹಾಜರಾಗಿದ್ದರು.
ಜಿಲ್ಲೆಯಲ್ಲಿ 20 ತಿಂಗಳ ನಂತರ ಒಂದರಿಂದ 5ನೇ ತರಗತಿಗಳು ಆರಂಭವಾಗಿದ್ದು, ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ವಿದ್ಯಾರ್ಥಿಗಳಿಗಾಗಿ ಎದುರು ನೋಡುತ್ತಿದ್ದ ಶಿಕ್ಷಕರಿಗೆಒಂದು ಕಡೆ ಖುಷಿಯಾದರೆ, ಮತ್ತೂಂದೆಡೆಕೊರೊನಾ ಸೋಂಕಿನ ಪ್ರಭಾವವದಿಂದ ಕೇವಲ ಆನ್‌ಲೈನ್ ಶಿಕ್ಷಣದ ಮೂಲಕ ದೂರ ಉಳಿದಿದ್ದ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದು ತಮ್ಮಸ್ನೇಹಿತರನ್ನು ಭೇಟಿ ಮಾಡುವ ಸೌಭಾಗ್ಯ ಪಡೆದುಕೊಂಡರು.
ಹೂ ನೀಡಿ ಸ್ವಾಗತ: ಜಿಲ್ಲಾಡಳಿತದ ಸೂಚನೆ ಮೇರೆಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿ ಕಾರಿಗಳು, ಮಕ್ಕಳಿಗೆ ಗುಲಾಬಿ ಹೂವು ಮತ್ತು ಚಾಕ್‌ಲೇಟ್ ನೀಡಿ ಶಾಲೆಗೆ ಸ್ವಾಗತಿಸಿದರು. ಅದಕ್ಕೂ ಮುನ್ನೆ ಶಾಲೆಗೆ ಪ್ರವೇಶ ಮಾಡಿದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಸಿಂಪಡಿಸಿ ಅವಕಾಶ ಕಲ್ಪಿಸಲಾಯಿತು. ಕೊರೊನಾ ಸೋಂಕಿನ ಭೀತಿ ಇಲ್ಲದಿದ್ದರೂ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡದೆ ಪ್ರಾಥಮಿಕ ತರಗತಿ ಆರಂಭಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್-19 ಮಾರ್ಗಸೂಚಿ ಪಾಲಿಸುವ ಮೂಲಕ ಸೋಮವಾರದಿಂದ ಒಂದರಿಂದ ಐದನೇ ತರಗತಿಗೆ ಶಾಲೆಗಳನ್ನು ಆರಂಭಿಸಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಶಿಕ್ಷಕರು ಜಾಗೃತಿಯಿಂದ ಕೆಲಸ ಮಾಡಲು ಸೂಚನೆ ನೀಡಲಾಗಿದೆ.
-ಆಂಜನೇಯ, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಡ್ಲಘಟ್ಟ ತಾಲೂಕು.
ಜಿಲ್ಲೆಯಲ್ಲಿ 20 ತಿಂಗಳ ನಂತರ ಒಂದರಿಂದ 5ನೇ ತರಗತಿವರೆಗೆ ಪಾಠ ಪ್ರವಚನಗಳು ಪ್ರಾರಂಭವಾಗಿವೆ. ವಿದ್ಯಾರ್ಥಿಗಳು ಖುಷಿಯಾಗಿ ಶಾಲೆಗಳಿಗೆ ಬಂದಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಶೇ.60.78 ವಿದ್ಯಾರ್ಥಿಗಳು ಹಾಜರಾಗಿದ್ದು, ಮುಂದಿನ ದಿನಗಳಲ್ಲಿ ಶೇ.100 ಮಂದಿ ಶಾಲೆಗೆ ಹಾಜರಾಗಲಿದ್ದಾರೆ ಎಂಬ ವಿಶ್ವಾಸ ತಮಗಿದೆ.
-ಜಯರಾಂರೆಡ್ಡಿ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ.
-ಎಂ.ಎ.ತಮೀಮ್ ಪಾಷ