ಬೆಂಗಳೂರು: ಮುಖ್ಯಮಂತ್ರಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸರಿಯಾಗಿ ಸ್ಪಂದಿಸದಕ್ಕೆ ಅಸಮಾಧಾನಗೊಂಡ ಕಟ್ಟಡ ನಿರ್ಮಾಣ ಕಾರ್ಮಿಕನೊಬ್ಬ ಜೆ.ಪಿ.ನಗರದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೊಪ್ಪಳ ಮೂಲದ ಮನ್ಸೂರ್ ಬಂಧಿತ. ನಿರ್ಮಾಣ ಹಂತದ ಕಟ್ಟಡ ಕಾರ್ಮಿಕನಾಗಿರುವ ಮನ್ಸೂರ್, ಒಂದೂವರೆ ವರ್ಷಗಳಿಂದ ಕೂಡ್ಲು ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಈ ಮಧ್ಯೆ ಭಾನುವಾರ ಸಂಜೆ ಕಂಠಪೂರ್ತಿ ಮದ್ಯ ಸೇವಿಸಿದ ಮನ್ಸೂರ್, ರಾತ್ರಿ 10 ಗಂಟೆ ಸುಮಾರಿಗೆ “ನಮ್ಮ -100’ಗೆ ಕರೆ ಮಾಡಿ ಜೆ.ಪಿ.ನಗರದಲ್ಲಿರುವ ಸಿಎಂ ಕುಮಾರಸ್ವಾಮಿ ಮನೆಗೆ ಬಾಂಬ್ ಇಟ್ಟಿದ್ದೇನೆ.
ಇನ್ನು ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಕರೆ ಸ್ಥಗಿತಗೊಳಿಸಿದ್ದಾನೆ. ಇದರಿಂದ ಆತಂಕಗೊಂಡ ಪೊಲೀಸ್ ಸಹಾಯವಾಣಿ ಸಿಬ್ಬಂದಿ ಕೂಡಲೇ ಜೆ.ಪಿ.ನಗರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಮುಖ್ಯಮಂತ್ರಿಗಳ ವಿಶೇಷ ಭದ್ರತೆ ಪಡೆ, ಜೆ.ಪಿ.ನಗರ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಇಡೀ ಮನೆಯ ಸುತ್ತ-ಮುತ್ತ ಪರಿಶೀಲಿಸಿದೆ. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತಯಾಗಿಲ್ಲ. ಹೀಗಾಗಿ ಹುಸಿ ಕರೆ ಎಂದು ನಿಟ್ಟುಸಿರು ಬಿಟ್ಟಿದ್ದರು. ಈ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಿಎಂರಿಂದ ಸ್ಪಂದನೆ ಇಲ್ಲ: ನಾಲ್ಕೈದು ಬಾರಿ ಮುಖ್ಯಮಂತ್ರಿ ಜನತಾದರ್ಶನ ಕಾರ್ಯಕ್ರಮದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಉಚಿತ ಮನೆ ಕೊಡಿಸುವಂತೆ ಮನವಿ ಮಾಡಿದ್ದೆ. ಆದರೆ, ಸಕರಾತ್ಮಕವಾಗಿ ಸಿಎಂ ಸ್ಪಂದಿಸಲಿಲ್ಲ.
ಅವರು ಸರಿಯಾಗಿ ಪ್ರತಿಕ್ರಿಯಿಸಿದ್ದರೆ, ನನಗೆ ಉಚಿತ ಮನೆಯಾದರೂ ಲಭಿಸುತ್ತಿತ್ತು. ಇದರಿಂದ ಬೇಸರಗೊಂಡು ಎಲ್ಲರ ಗಮನ ಸೆಳೆಯಲು ಕುಡಿದ ಅಮಲಿನಲ್ಲಿ ನನ್ನ ಹೆಸರನ್ನು ಗೋಪಾಲ ಎಂದು ಬದಲಿಸಿಕೊಂಡು “ನಮ್ಮ-100’ಕ್ಕೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.