ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಿಂಗಾಯತರಲ್ಲ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಲಿಂಗಾಯತ ಅಂತ ಯಾರು ಹೇಳಿದ್ದು ಎಂದು ಪ್ರಶ್ನಿಸಿದರು. ಯಾರು ಲಿಂಗಾಯತ ಧರ್ಮವನ್ನು ಪಾಲಿಸುತ್ತಾನೋ ಅವನೇ ನಿಜವಾದ ಲಿಂಗಾಯತ.
ಅದು ಸಿದ್ದರಾಮಯ್ಯ ಆಗಿರಲಿ ಅಥವಾ ಕುಮಾರಸ್ವಾಮಿ ಆಗಿರಲಿ. ಲಿಂಗಾಯತ ಎಂಬುದು ಒಂದು ತತ್ವ ಸಿದ್ಧಾಂತವೇ ವಿನ: ಒಂದು ಜಾತಿಗೆ ಸೀಮಿತ ಅಲ್ಲ. ಹಾಗಾಗಿ, ಯಡಿಯೂರಪ್ಪ ಲಿಂಗಾಯತರಲ್ಲ. ಯಡಿಯೂರಪ್ಪ, ಲಿಂಗಾಯತ ತತ್ವವನ್ನು ಒಪ್ಪಿಕೊಂಡು ಅದಕ್ಕೆ ಅನುಗುಣವಾಗಿ ನಡೆದುಕೊಂಡಿದ್ದರೆ ನಾವು ಅವರನ್ನು ಲಿಂಗಾಯತರು ಎಂಬುದಾಗಿ ಹೇಳಬಹುದು. ಅವರಲ್ಲಿ ಆ ತತ್ವ ಇದೆಯೋ, ಇಲ್ಲವೋ ಎಂಬುದು ಎಲ್ಲರಿಗೂ ಗೊತ್ತು.
ಅದರ ಬಗ್ಗೆ ವಿವರಣೆಯನ್ನು ನಾನು ನೀಡಬೇಕಾಗಿಲ್ಲ ಎಂದರು. ರಾಜ್ಯ ಸರಕಾರ ಮಠಗಳಿಗೆ ನೀಡುವ ಹಣವನ್ನು ನಾವು ಸ್ವೀಕಾರ ಮಾಡುವುದಿಲ್ಲ. ಯಾವುದಾದರೂ ಯೋಜನೆ ಹಾಕಿಕೊಂಡು ಅದಕ್ಕೆ ಪೂರಕವಾಗಿ ಅನುದಾನ ನೀಡಬೇಕು. ಅದು ಬಿಟ್ಟು ನೇರವಾಗಿ ಮಠಕ್ಕೆ ಹಣ ನೀಡಿದರೆ ನಾವು ತೆಗೆದುಕೊಳ್ಳುವುದಿಲ್ಲ. ಮೊದಲು ಮಠಗಳಿಗೆ ಹಣ ನೀಡಿದ ಯಡಿಯೂರಪ್ಪ ಅವರನ್ನು ಟೀಕೆ ಮಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಕೂಡ ಮುಂದೆ ಅದೇ ಕೆಲಸ ಮುಂದುವರಿಸಿದರು ಎಂದು ಸ್ವಾಮೀಜಿ ಟೀಕಿಸಿದರು.
ಪ್ರತ್ಯೇಕ ಧರ್ಮ ಚರ್ಚೆ ಅಗತ್ಯವಿಲ್ಲ: ಲಿಂಗಾಯತ ಪ್ರತ್ಯೇಕ ಧರ್ಮ. ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಪೇಜಾವರ ಶ್ರೀಪಾದರು ಚರ್ಚೆಗೆ ಕರೆ ನೀಡಿದ್ದರು. ನಾವು ಅವರಿದ್ದಲ್ಲಿಗೆ ಹೋಗುವುದಿಲ್ಲ, ಅವರು ಬೇಕಿದ್ದರೆ ಸಾಣೆಹಳ್ಳಿಗೆ ಬರಲಿ, ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ನಾವು ಒಂದು ತಿಂಗಳು ರಾಜ್ಯಾದ್ಯಂತ “ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ. ಮುಂದಿನ ತಿಂಗಳು ಪೇಜಾವರ ಶ್ರೀಗಳಿಗೆ ಸಾಣೆಹಳ್ಳಿಗೆ ಬರುವಂತೆ ತಿಳಿಸುತ್ತೇನೆ ಎಂದರು. ಶಿವನನ್ನು ಪೂಜಿಸುವವರೆಲ್ಲ ಲಿಂಗಾಯತರು ಎಂಬ ಪೇಜಾವರ ಶ್ರೀಗಳ ಮಾತನ್ನು ಒಪ್ಪಲು ಸಾಧ್ಯವಿಲ್ಲ ಎಂದರು.