Advertisement

ನಾಡಿದ್ದು ಹರಪನಹಳ್ಳಿಗೆ ಮುಖ್ಯಮಂತ್ರಿ ಬೊಮ್ಮಾಯಿ

03:48 PM Apr 08, 2022 | Team Udayavani |

ಹರಪನಹಳ್ಳಿ: ಪಟ್ಟಣದ ಎಚ್‌ಪಿಎಸ್‌ ಕಾಲೇಜಿನ ಮೈದಾನದಲ್ಲಿ ಏ.10ರಂದು ನಡೆಯಲಿರುವ ಸೀತಾರಾಮ ಕಲ್ಯಾಣ ಮಹೋತ್ಸವ ಹಾಗೂ ಶಾಸಕ ಜಿ.ಕರುಣಾಕರರೆಡ್ಡಿ ಅವರ 60ನೇ ವರ್ಷದ ಷಷ್ಠಾಬ್ಧಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೂಕ್ತ ಬಂದೋಬಸ್ತ್ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

Advertisement

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಆದಿಯಾಗಿ ಸಂಪುಟದ ಸಚಿವರಾದ ಬಿ.ಶ್ರೀರಾಮುಲು, ಆನಂದ್‌ ಸಿಂಗ್‌, ಶಶಿಕಲಾ ಜೋಲ್ಲೆ, ಸಂಸದರಾದ ಜಿ.ಎಂ. ಸಿದ್ದೇಶ್ವರ, ವೈ. ದೇವೇಂದ್ರಪ್ಪ, ಮಾಜಿ ಸಚಿವರಾದ ಗಾಲಿ ಜನಾರ್ದನ್‌ರೆಡ್ಡಿ ಶಾಸಕರಾದ ಸೋಮಶೇಖರ್‌ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅಂದು ನಡೆಯುವ ಸೀತಾರಾಮ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೂ ಮುನ್ನ ಶಾಸಕ ಕರುಣಾಕರರೆಡ್ಡಿ ಅವರ ಜನ್ಮ ದಿನ ಪ್ರಯುಕ್ತ ಪಟ್ಟಣದ ಹೊರಹೊಲಯದಲ್ಲಿ ಇರುವ ದೇವರ ತಿಮಲಾಪುರ ಗ್ರಾಮದ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ನೇರವೇರಿಸಿ ನಂತರ ದೇವಸ್ಥಾನದ ಆವರಣದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌ ತಿಳಿಸಿದರು.

ಪೊಲೀಸ್‌ ಭದ್ರತೆ

ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಕಲ್ಪಿಸಲು ಬಿಗಿ ಬಂದೋಬಸ್ತ್ಗಾಗಿ ಎಸ್‌ಪಿ ಸೇರಿ ಮೂವರು ಡಿವೈಎಸ್‌ಪಿ, 6 ಸಿಪಿಐ 21 ಪಿಎಸ್‌ಐ, 41 ಎಎಸ್‌ಐ, 38 ಮಹಿಳಾ ಪೊಲೀಸ್‌ ಸೇರಿದಂತೆ 300 ಜನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಜತೆಗೆ 1 ಕೆಎಸ್‌ಆರ್‌ಪಿ ಹಾಗೂ 2 ಡಿಎಆರ್‌ ತುಕಡಿಗಳನ್ನು ಸಹ ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗಾಗಿ ಗುರುವಾರ ಪಟ್ಟಣಕ್ಕೆ ಆಗಮಿಸಿದ್ದ ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅರುಣ್‌ ಮಾಹಿತಿ ನೀಡಿದರು.

Advertisement

ಊಟದ ವ್ಯವಸ್ಥೆ

ಸುಮಾರು 15-20 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು, ಕಾರ್ಯಕ್ರಮಕ್ಕೆ ಬರುವ ಎಲ್ಲ ಕಾರ್ಯಕರ್ತರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕಾಲೇಜ್‌ ಮೈದಾನದಲ್ಲಿ ಒಟ್ಟು 20 ಕಡೆ ಊಟದ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಮಹಳೆಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಸಹ ಮಾಡಲಾಗಿದ್ದು, ಕುಡಿಯುವ ನೀರು ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗಾಗಿ ಸೂಕ್ತ ಆಸನ ವ್ಯವಸ್ಥೆಗೆ ಸಿದ್ಧತೆ ನಡೆಯುತ್ತಿದೆ.

ಬೆಂಗಳೂರಿಂದ ಪ್ರಯಾಣ

ಮುಖ್ಯಮಂತ್ರಿಗಳು ಏ.10ರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಎಚ್‌ ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಹೊರಟು ತುಮಕೂರು ಜಿಲ್ಲೆಯ ಬಿದನಗೆರೆ ಶ್ರೀ ಬಸವೇಶ್ವರ ಮಠದಲ್ಲಿ ಅಯೋಜಿಸಿರುವ 161 ಅಡಿ ಎತ್ತರದ ಪಂಚಮುಖೀ ಆಂಜನೇಯ ಸ್ವಾಮಿ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್‌ ಮೂಲಕ ಸಮಯ 12:15ಕ್ಕೆ ಹರಪನಹಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ಬಂದಳಿಯಲ್ಲಿದ್ದಾರೆ. ಅಲ್ಲಿಂದ ನೇರವಾಗಿ ಸೀತಾರಾಮ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ 2.30ರ ಸುಮಾರಿಗೆ ಇಲ್ಲಿಂದ ನಿರ್ಗಮಿಸಲಿದ್ದಾರೆ ಎಂದು ವೇಳಪಟ್ಟಿಯಲ್ಲಿ ಹೇಳಲಾಗಿದೆ.

ಇನ್ನು ಕರುಣಾಕರರೆಡ್ಡಿ ಅವರ 60ನೇ ವರ್ಷದ ಜನ್ಮ ದಿನ ಅಂಗವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆ-ವೃತ್ತಗಳಲ್ಲಿ ಶಾಸಕರಿಗೆ ಜನ್ಮ ದಿನ ಶುಭ ಕೋರಿರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next