Advertisement
ವಿಧಾನಸೌಧದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ತಿಂಗಳೂ ಜಿಲ್ಲೆಗಳಿಗೆ ಎರಡು ದಿನ ಭೇಟಿ ನೀಡಬೇಕು. ಮೊದಲ ದಿನ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಬೇಕು. ಮಾರನೇ ದಿನ ಕ್ಷೇತ್ರ ಭೇಟಿ ನೀಡಿ ಜಿಲ್ಲಾ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳು ಹಾಗೂ ಇಲಾಖಾ ಕಾರ್ಯ ಚಟುವಟಿಕೆಗಳ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
Related Articles
Advertisement
ಈ ಎಲ್ಲಾ ವಿಚಾರಗಳ ಬಗ್ಗೆ ಆಯಾ ಪಂಚಾಯ್ತಿ ಕಚೇರಿಗಳಲ್ಲಿ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿತ್ತು. ಈ ಬಗ್ಗೆ ಪರಿಶೀಲಿಸಿದ್ದೀರಾ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದಾಗ ಅಧಿಕಾರಿಗಳಲ್ಲಿ ಮೌನವೇ ಉತ್ತರವಾಗಿತ್ತು. ಇದರಿಂದ ಅಸಮಾಧಾನಗೊಂಡ ಮುಖ್ಯಮಂತ್ರಿಗಳು, ಕೂಡಲೇ ತಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಮಾಹಿತಿ ನೀಡುವಂತೆ ಆದೇಶಿಸಿದರು.
ಅದೇ ರೀತಿ ಜಾನುವಾರು ಗಣತಿ ಬಗ್ಗೆಯೂ ಪ್ರಶ್ನಿಸಿದ ಮುಖ್ಯಮಂತ್ರಿಗಳು, ಬರದ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಲ್ಲಿ ಜಾನುವಾರು ಗಣತಿ, ಮೇವಿನ ಲಭ್ಯತೆ ಬಗ್ಗೆ ಪರಿಶೀಲಿಸಲು ಸೂಚಿಸಿದ್ದೆ. ಅದರಂತೆ ಎಷ್ಟರ ಮಟ್ಟಿಗೆ ಕೆಲಸವಾಗಿದೆ? ಜಾನುವಾರುಗಳಿಗೆ ಮೇವು, ನೀರು, ನೆರಳು ಒದಗಿಸಲು ಕೈಗೊಂಡಿರುವ ಕ್ರಮಗಳೇನು? ಗೋಶಾಲೆಗಳಲ್ಲಿ ಮೇವು, ಔಷಧ ಲಭ್ಯವಿದೆಯೇ? ನೀರು, ನೆರಳು ಇದೆಯೇ? ಎಂದು ಕೇಳಿದ ಮುಖ್ಯಮಂತ್ರಿಗಳು ಈ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡುವಂತೆಯೂ ನಿರ್ದೇಶಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಸುಭಾಷ್‌ಚಂದ್ರ ಕುಂಟಿಯಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಅಭಿವೃದ್ಧಿ ಆಯುಕ್ತ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ಸುಧಾರಣಾ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕಲ್ಪನಾ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ತುಷಾರ್ ಗಿರಿನಾಥ್ ಹಾಗೂ ಎಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೊಲ ಮತ್ತು ಆಮೆ ಜಾತಿಯ ಅಧಿಕಾರಿಗಳು!ಎಲ್ಲರಿಗೂ ಒಂದೇ ರೀತಿಯ ಕೆಲಸ, ಒಂದೇ ರೀತಿಯ ಗುರಿ. ಆದರೆ, ಒಂದೆಡೆ ಮೊಲದ ಜಾತಿಯ ಅಧಿಕಾರಿಗಳು, ಇನ್ನೊಂದೆಡೆ ಆಮೆ ರೀತಿಯ ಅಧಿಕಾರಿಗಳು…! ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದು ಹೀಗೆ. ಮನೆ ನಿರ್ಮಾಣದಲ್ಲಿ ಕೊಪ್ಪಳ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಕೊನೇ (30ನೇ) ಸ್ಥಾನದಲ್ಲಿದೆ. ಅದರಲ್ಲೂ ಗುರಿ ಸಾಧನೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಕೆಲವು ಜಿಲ್ಲೆಗಳಲ್ಲಿ ಶೇ. 100ರಷ್ಟು ಗುರಿ ಸಾಧಿಸಿದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಶೇ. 60-70ರ ಪ್ರಮಾಣದಲ್ಲಿದೆ. ಎಲ್ಲೆಡೆ ಒಂದೇ ರೀತಿಯ ವ್ಯವಸ್ಥೆ, ಒಂದೇ ರೀತಿಯ ಸಮಸ್ಯೆಗಳಿರುವಾಗ ಒಂದೆಡೆ ಕೆಲಸ ಸಾಧ್ಯವಾಗುತ್ತದೆಯಾದರೆ ಮತ್ತೂಂದೆಡೆ ಆಗದೇ ಇರಲು ಕಾರಣವೇನು? ಒಂದೆಡೆ ಮೊಲದ ಜಾತಿಯ, ಮತ್ತೂಂದೆಡೆ ಆಮೆ ಜಾತಿಯ ಅಧಿಕಾರಿಗಳಿದ್ದಾರೆಯೇ? ಈ ಬಗ್ಗೆ ಗಮನಹರಿಸಿ ಕೂಡಲೇ ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಆದೇಶಿಸಿದರು. ನೋಟು ಅಮಾನ್ಯದಿಂದ ಹಣವಿದ್ದರೂ ಸಮಸ್ಯೆ
ಕೇಂದ್ರ ಸರ್ಕಾರದ ಅಪನಗದೀಕರಣದ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಮೇಲೆ ಬಿದ್ದಿದೆ. ಸರ್ಕಾರದ ಖಜಾನೆ ಹಾಗೂ ಬ್ಯಾಂಕ್ ಖಾತೆಗಳಲ್ಲಿ ಹಣ ಲಭ್ಯವಿದ್ದರೂ ವಹಿವಾಟಿನ ಮೇಲೆ ಆರ್ಥಿಕ ನಿರ್ಬಂಧ ಹೇರಲಾಗಿದೆ ಎಂದು ಹೇಳಿ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಫಲಾನುಭಗಳು ಹಾಗೂ ಗುತ್ತಿಗೆದಾರರಿಗೆ ನೀಡಿರುವ ಸರ್ಕಾರದ ಚೆಕ್‌ಗಳನ್ನು ಮಾನ್ಯ ಮಾಡುತ್ತಿಲ್ಲ. ಇದು ನಗದು ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (ಆರ್‌ಟಿಜಿಎಸ್) ಮೂಲಕ ನಿಧಿ ವರ್ಗಾವಣೆಗೂ ಸಮಸ್ಯೆ ತಂದೊಡ್ಡಿದ್ದು, ರಾಜ್ಯದ ಬ್ಯಾಂಕ್‌ಗಳಿಗೆ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಗದು ಪೂರೈಕೆಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂಬ ಅಂಶವನ್ನು ಅಧಿಕಾರಿಗಳು ಸಭೆಯಲ್ಲಿ ಮುಖ್ಯಮಂತ್ರಿಗಳ ಗನಮಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕೂಡಲೇ ಆರ್‌ಬಿಐ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಮಾತುಕತೆ ಫಲಿತಾಂಶವನ್ನು ನನ್ನ ಗಮನಕ್ಕೆ ತನ್ನಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು. ಅಧಿಕಾರಿಗಳಿಗೆ ಸಿಎಂ ನೀಡಿದ ನಿರ್ದೇಶನಗಳು
– ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯನಿಗೆ ಏಳು ಕೆ.ಜಿ. ಅಕ್ಕಿ ವಿತರಿಸುತ್ತಿದ್ದು, ಇದು ಸರಿಯಾಗಿ ಜಾರಿಯಾಗುತ್ತಿರುವ ಬಗ್ಗೆ ಪರಿಶೀಲಿಸಬೇಕು.
– ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಸುಧಾರಿಸಿ ಅಧಿಕಾರಿಗಳು ಜನರಿಗೆ ಸ್ಪಂದಿಸುವಂತೆ ಕ್ರಮ ಕೈಗೊಳ್ಳಬೇಕು.
– ಕರ್ನಾಟಕವು ನಿಗಧಿತ ಅವಧಿಗೂ ಮುನ್ನ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಲು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು
– ಸ್ಥಳೀಯ ಸಂಸ್ಥೆಗಳಲ್ಲಿ ಎಂಜಿನಿಯರ್‌ಗಳ ಕೊರತೆ ಬಗೆಹರಿಸಲು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಿಗೆ ಜವಾಬ್ದಾರಿ ನೀಡಬೇಕು
– ಎಸ್‌ಸಿ, ಎಸ್ಟಿ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಬೇಕು.