Advertisement

ದಲಿತ ಸಿಎಂ: ಸಿದ್ದು ಮಾತಿನ ಮರ್ಮವೇನು?

06:10 AM May 14, 2018 | Team Udayavani |

ಬೆಂಗಳೂರು: ಮತದಾನ ಮುಗಿಯುವವರೆಗೂ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಬಹಿರಂಗವಾಗಿ
ಹೇಳಿಕೊಂಡು ಚುನಾವಣೆ ಎದುರಿಸಿದ್ದ ಸಿಎಂ ಸಿದ್ದರಾಮಯ್ಯ ಮತದಾನ ಮುಗಿದು ಬೆಳಗಾಗುವುದರಲ್ಲಿ ದಲಿತ ಮುಖ್ಯಮಂತ್ರಿ ವಿಷಯ ಪ್ರಸ್ತಾಪಿಸಿ ಹೊಸ ರಾಜಕೀಯ ಲೆಕ್ಕಾಚಾರದ ಆಲೋಚನೆಗಳಿಗೆ ಇಂಬು ನೀಡಿದ್ದಾರೆ.

Advertisement

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದ್ದರೂ, ಸಂಪೂರ್ಣವಾಗಿ
ಅವರನ್ನೇ ನಂಬದೇ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ನೇರವಾಗಿ ರಾಜ್ಯ ಚುನಾವಣಾ ಅಖಾಡಕ್ಕೆ ಇಳಿದು
ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ವಿರುದ್ಧ ನೇರ ಆರೋಪ ಮಾಡಿದ್ದರು.

ಇಡೀ ಕಾಂಗ್ರೆಸ್‌ನ ಏಕೈಕ ಶಕ್ತಿ ಸಿದ್ದರಾಮಯ್ಯ ಎಂದು ಅರಿತ ಬಿಜೆಪಿ, ಅವರನ್ನು ಸೋಲಿಸಿದರೆ ಕಾಂಗ್ರೆಸ್‌ನ 
ಬೆನ್ನೆಲುಬೇ ಮುರಿದಂತಾಗುತ್ತದೆ ಎಂದು ಅವರ ವಿರುದ್ಧದ ಹೋರಾಟದಲ್ಲಿ ಪರೋಕ್ಷವಾಗಿ ಜೆಡಿಎಸ್‌ ಸಹಕಾರ ಪಡೆದಿದ್ದು ಗುಟ್ಟಾಗಿ ಉಳಿಯಲಿಲ್ಲ. ಬಿಜೆಪಿ, ಜೆಡಿಎಸ್‌ನ ಅಪವಿತ್ರ ಮೈತ್ರಿಯ ಗುಟ್ಟು ಅರಿತಿದ್ದ ಸಿದ್ದರಾಮಯ್ಯ ಹೇಗಾದರೂ ಮಾಡಿ ಗೆಲುವು ಪಡೆಯಬೇಕೆಂಬ ಲೆಕ್ಕಾಚಾರದಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದರು.

ಕಾಂಗ್ರೆಸ್‌ ಹೈಕಮಾಂಡ್‌ ಕೂಡ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕೆಂದರೆ, ಸಿದ್ದರಾಮಯ್ಯ ಅನಿವಾರ್ಯ
ಎನ್ನುವುದನ್ನು ಒಪ್ಪಿಕೊಂಡು ಚುನಾವಣೆ ನೇತೃತ್ವವನ್ನು ಅವರ ಕೈಗೆ ನೀಡಿತು. ಹೈಕಮಾಂಡ್‌ನ‌ ಅಸಹಾಯಕತೆಯನ್ನು ಸಮರ್ಥವಾಗಿ ಬಳಸಿಕೊಂಡ ಸಿದ್ದರಾಮಯ್ಯ ಪಕ್ಷ ಅಧಿಕೃತವಾಗಿ ಸಿಎಂ ಅಭ್ಯರ್ಥಿ ಎಂದು ಘೊಷಿಸದಿದ್ದರೂ, ತಾವೇ ಮುಂದಿನ ಸಿಎಂ ಎನ್ನುವುದನ್ನು ನೇರವಾಗಿಯೇ ಬಿಂಬಿಸಿದರು. ಜಾಣತನದಿಂದಲೇ ಜೆಡಿಎಸ್‌ ನಾಯಕರ ವಿರುದ್ಧ ಬಹಿರಂಗ ಆರೋಪ ಮಾಡಿ, ರಾಹುಲ್‌ ಗಾಂಧಿ ಕಡೆಯಿಂದಲೂ ವಾಗ್ಧಾಳಿ ಮಾಡಿಸಿದರು.

ಸಿದ್ದರಾಮಯ್ಯ ಅವರ ಈ ನಡೆ ಪಕ್ಷದ ಇತರ ನಾಯಕರಿಗೆ ಇರುಸುಮುರಿಸು ಮಾಡಿದ್ದುಂಟು. ಸಿದ್ದರಾಮಯ್ಯ ಜೆಡಿಎಸ್‌ ವಿರುದ್ಧ ಎಷ್ಟೇ ನೇರವಾಗಿ ವಾಗ್ಧಾಳಿ ನಡೆಸಿದರೂ ಖರ್ಗೆ, ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌, ದೇಶಪಾಂಡೆ ಸೇರಿ ಯಾವ ನಾಯಕರೂ ದೇವೇಗೌಡರ ವಿರುದಟಛಿ ಮಾತನಾಡದೆ ಜಾಣ ಮೌನ ತಾಳಿದರು.

Advertisement

ಈಗ ಸಿಎಂ ಸಿದ್ದರಾಮಯ್ಯ ಏಕಾಏಕಿ ದಲಿತ ಮುಖ್ಯಮಂತ್ರಿಗೆ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿರುವುದರ ಹಿಂದೆ ಅತಂತ್ರ ವಿಧಾನಸಭೆ ಸೂಚನೆ ದೊರೆತಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ. ಅತಂತ್ರ ವಿಧಾನಸಭೆ ರಚನೆಯಾದರೆ, ಅನಿವಾರ್ಯವಾಗಿ ಸರ್ಕಾರ ರಚನೆಯಿಂದ ಸಿದ್ದರಾಮಯ್ಯ ಹಿಂದೆ ಸರಿಯಬೇಕಾಗುತ್ತದೆ. ಅಲ್ಲದೆ,
ಕಾಂಗ್ರೆಸ್‌ಗೆ ಜೆಡಿಎಸ್‌ನ ಅನಿವಾರ್ಯತೆ ಮುಖ್ಯವಾಗಿದೆ. ಆದರೆ, ತಾವು ಪ್ರಚಾರದ ಸಂದರ್ಭದಲ್ಲಿ ದೇವೇಗೌಡರ
ವಿರುದ್ಧ ನೇರವಾಗಿಯೇ ವಾಗ್ಧಾಳಿ ನಡೆಸಿರುವುದರಿಂದ ದೇವೇಗೌಡರು ತಮ್ಮೊಂದಿಗೆ ಕೈ ಜೋಡಿಸುವುದಿಲ್ಲ ಎಂಬ
ಸತ್ಯ ಅವರಿಗೆ ಗೊತ್ತಾದಂತೆ ಕಾಣುತ್ತಿದೆ.

ಸರ್ಕಾರದಿಂದ ಹೊರಗುಳಿಯುವ ಪ್ರಸಂಗ ಬಂದರೆ, ತಾವೇ ಮುಂದೆ ನಿಂತು ಬೇರೆಯವರಿಗೆ ಅವಕಾಶ ಕಲ್ಪಿಸಿಕೊಟ್ಟೆ ಎಂಬ ಲೆಕ್ಕಾಚಾರ ಇದರ ಹಿಂದೆ ಅಡಗಿರಬಹುದು. ಅಲ್ಲದೆ, ಕಾಂಗ್ರೆಸ್‌ ದಲಿತ ರನ್ನು ಸಿಎಂ ಮಾಡುವುದಿಲ್ಲ ಎಂದು ಹೇಳುತ್ತಿರುವ ಜೆಡಿಎಸ್‌ ನಾಯಕರ ನಿಲುವು ಅರಿಯುವ ಪ್ರಯತ್ನವೂ ಇದಾಗಿರಬಹುದು.

ಕಾಂಗ್ರೆಸ್‌ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆಂದರೂ ಜೆಡಿಎಸ್‌ ಬೆಂಬಲ ನೀಡದಿದ್ದರೆ, ಅದು ದಲಿತ ವಿರೋಧಿ
ಎಂದು ಬಿಂಬಿಸುವ ಲೆಕ್ಕಾಚಾರವೂ ಇದರ ಹಿಂದೆ ಅಡಗಿರಬಹುದು. ಒಂದು ವೇಳೆ, ಕಾಂಗ್ರೆಸ್‌ ಸ್ಪಷ್ಟ ಬಹುಮತ ಬಂದರೆ, ತಾವೇ ಮುಂದೆ ನಿಂತು ಸಿದಲಿತರನ್ನು ಸಿಎಂ ಮಾಡುತ್ತಾರಾ ಎನ್ನುವುದೂ ಕೂಡ ಮುಖ್ಯವಾಗಲಿದೆ.

ಡಿ.ಕೆ. ಶಿವಕುಮಾರ್‌ ಕಾರ್ಯಪ್ರವೃತ್ತ
ಅತಂತ್ರ ವಿಧಾನಸಭೆ ಸುಳಿವು ಅರಿತಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಾರ್ಯ ಪ್ರವೃತ್ತರಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಗೆಲ್ಲುವ ವಿಶ್ವಾಸವಿರುವ ಪಕ್ಷೇತರ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ದಲಿತ ಸಿಎಂ ಹೇಳಿಕೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಇತರ ನಾಯಕರನ್ನು ಜಾಗೃತರಾಗುವಂತೆ ಮಾಡಿದ್ದು, ಪಕ್ಷದ ಬಹುಮತಕ್ಕಿಂತ ಅತಂತ್ರವೇ ಲೇಸೆಂದು ಲೆಕ್ಕಾಚಾರ ಹಾಕುವಂತೆ ಮಾಡಿದೆ.ಆದರೆ, ಇದಕ್ಕೆ ಕಾಂಗ್ರೆಸ್‌ ನಾಯಕರ ಪ್ರತಿಕ್ರಿಯೆಗಿಂತ ದೇವೇಗೌಡರ ನಿಲುವೇನು ಎನ್ನುವುದು ಮುಖ್ಯವಾಗಲಿದೆ.

–  ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next