ಬೆಂಗಳೂರು: ಬುದ್ಧ, ಬಸವ, ಕನಕ, ಗಾಂಧಿ, ಅಂಬೇಡ್ಕರ್ ಮೊದಲಾದವರ ಕನಸಿನ ಭಾರತ ನಿರ್ಮಾಣದ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ ಹಾಗೂ ಸಹಬಾಳ್ವೆ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿ ಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ 31 ಉತ್ತಮ ಶಿಕ್ಷಕ ಸಹಿತ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಿ ಅವರು ಮಾತನಾಡಿದರು.
ಡಾ| ಸರ್ವೇಪಲ್ಲಿ ರಾಧಾಕೃಷ್ಣನ್ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಪ್ರತಿ ಶಿಕ್ಷಕನಿಗೆ ರಾಧಾಕೃಷ್ಣನ್ ಸ್ಫೂರ್ತಿಯಾಗಿದ್ದು, ಶಿಕ್ಷಕ ವೃತ್ತಿಯ ಪೂಜ್ಯತೆ ಹಾಗೂ ಶಿಕ್ಷಕ, ವಿದ್ಯಾರ್ಥಿ ನಡುವಿನ ಸಂಬಂಧದ ಪಾವಿತ್ರ್ಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು. ಶಾಲಾ ಶಿಕ್ಷಕರ ನಡವಳಿಕೆ, ಗುಣ ಮತ್ತು ಕ್ರಿಯಾಶೀಲತೆ ಮಕ್ಕಳ ಮೇಲೆ ಪ್ರಭಾವ ಬೀರುವಂತಿರಬೇಕು. ದೇಶದ ಅಥವಾ ರಾಜ್ಯದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಮಾನವ ಸಂಪನ್ಮೂಲದಲ್ಲಿ ಅಭಿವೃದ್ಧಿ ಹೊಂದದ ದೇಶ ಸರ್ವಾಂಗೀಣ ವಿಫಲತೆ ಕಾಣುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಯುವ ಸಮುದಾಯವನ್ನು ಸಜ್ಜುಗೊಳಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಕಿವಿ ಮಾತು ಹೇಳಿದರು.
ಶಿಕ್ಷಕರು ಓದು, ಬರಹ ಕಲಿಸುವ ಜತೆಗೆ ಬದುಕಿಗೆ ಸ್ಪಂದಿಸುವ ಮತ್ತು ವ್ಯಕ್ತಿತ್ವ ವಿಕಸನದ ಶಿಕ್ಷಣವನ್ನು ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆಯ ಅನಾವರಣ ಮಾಡಿ, ಸರಕಾರಿ ಶಾಲೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಬೇಕು ಎಂಬ ಸಲಹೆ ನೀಡಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ಈಗಾಗಲೇ 7,905 ಪ್ರಾ.ಶಾಲಾ ಶಿಕ್ಷಕರ ನೇಮಕ ಮಾಡಿದ್ದೇವೆ, 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಭಾಷಾ ಹಾಗೂ ವಿಷಯ ಶಿಕ್ಷಕರ ನೇಮಕಕ್ಕೂ ಚಾಲನೆ ನೀಡಿದ್ದೇವೆ. ಗ್ರಂಥಪಾಲಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಜತೆಗೆ ಡಿ ದರ್ಜೆ ನೌಕರರ ಭರ್ತಿಗೂ ಚಿಂತನೆ ನಡೆಯುತ್ತಿದೆ. ಶಾಲೆಗಳ ಉನ್ನತೀಕರಣ ಮಾಡುತ್ತಿದ್ದೇವೆ ಎಂದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಗೆ ಪ್ರತಿವರ್ಷ ಇಲಾಖೆಯಿಂದ ವಿಶೇಷ ಬಹುಮಾನ ನೀಡಲಾಗುತ್ತದೆ. ಈ ಹಿಂದೆ ಕಂಪ್ಯೂಟರ್, ಪುಸ್ತಕ ಇತ್ಯಾದಿ ನೀಡುತ್ತಿದ್ದೆವು. ಈ ವರ್ಷ ಆ ಶಾಲೆಯ ಅಭಿವೃದ್ಧಿಗೆ 2.50 ಲಕ್ಷ ನೀಡಲಿದ್ದೇವೆ.
– ತನ್ವೀರ್ ಸೇಠ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ.